
ಬೆಂಗಳೂರು: ದೇಶ -ವಿದೇಶದಲ್ಲಿ ನೂರಾರು ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ ಗಳಿಕೆ ಮತ್ತು ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ನಾಯಕರೂ ಆಗಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಪುತ್ರ ಕೆ.ಇ.ಕಾಂತೇಶ್ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ದೂರು ದಾಖಲಿಸಲಾಗಿದೆ.
ಲೋಕಾಯುಕ್ತ ಪೊಲೀಸರ ತನಿಖಾ ವರದಿ ಆಧಾರದ ಮೇಲೆ ಶಿವಮೊಗ್ಗದ ವಕೀಲ ವಿನೋದ್ ಗುರುವಾರ ಶಾಂತಿನಗರದಲ್ಲಿನ ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಬೇನಾಮಿ ಆಸ್ತಿ ಗಳಿಕೆ ಮಾಡಿ, ಅಕ್ರಮವಾಗಿ ಹೂಡಿಕೆ ಮಾಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಮನಿ ಲಾಂಡರಿಂಗ್ ಕಾಯ್ದೆಯಡಿ (ಅಕ್ರಮ ಹಣ ವರ್ಗಾವಣೆ) ದೂರು ಸಲ್ಲಿಸಲಾಗಿದೆ.
ಈಶ್ವರಪ್ಪ ಅವರು ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಯುಎಇನ ಅಬುದಾಭಿಯಲ್ಲಿ ಆಸ್ತಿ ಮಾಡಿ ಬೇನಾಮಿ ಕಂಪನಿಗಳನ್ನು ಆರಂಭಿಸಿದ್ದಾರೆ. ಪುತ್ರ, ಪುತ್ರಿಯರು ಮತ್ತು ಅಳಿಯಂದಿರ ಹೆಸರಲ್ಲಿ ಅಕ್ರಮ ಆಸ್ತಿ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿಯೂ ಗೊತ್ತಾಗಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವ್ಯಾಪ್ತಿಗೆ ಇದು ಬರುವುದರಿಂದ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ ಎಂದು ವಕೀಲ ವಿನೋದ್ ತಿಳಿಸಿದ್ದಾರೆ.
ಶಿವಮೊಗ್ಗದ ವಿವಿಧೆಡೆ ಶಾಲೆ, ಕೈಗಾರಿಕೆ ಘಟಕ, ಆಟೋಮೊಬೈಲ್ ಶೋರೂಂ ಸೇರಿದಂತೆ ಹಲವು ಆಸ್ತಿ ಮಾಡಲಾಗಿದೆ. 2006ರಲ್ಲಿ ಸಚಿವರಾದ ಆರು ತಿಂಗಳ ಬಳಿಕ ತಮ್ಮ ಮತ್ತು ಪತ್ನಿಯ ಹೆಸರಲ್ಲಿ ವಾಣಿಜ್ಯ ಸಂಕೀರ್ಣ ಖರೀದಿ ಮಾಡಿದ್ದಾರೆ. ಕೈಗಾರಿಕೆ ನಿರ್ಮಿಸುವ ಉದ್ದೇಶದಿಂದ ಹಲವರ ಹೆಸರಿನಲ್ಲಿದ್ದ ಕೃಷಿ ಭೂಮಿಯನ್ನು ಖರೀದಿಸಿ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಆದರೆ, ಕೈಗಾರಿಕೆ ನಿರ್ಮಿಸುವ ಬದಲು ಪಿಯು ಕಾಲೇಜನ್ನು ನಿರ್ಮಾಣ ಮಾಡಲಾಗಿದೆ. ಇದು ಕಾನೂನು ಬಾಹಿರವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆಂಗಳೂರಿನ ಭಾರತ್ ಇಂಡಸ್ಟ್ರಿಯಲ್ಲಿ ಸಂಬಂಧಿಕರು ಶೇರು ಹೊಂದಿದ್ದಾರೆ. ಅಲ್ಲದೇ, ಕುಟುಂಬದ ಸದಸ್ಯರು ಗಣಿಗಾರಿಕೆಯ ಪಾಲುದಾರರಾಗಿದ್ದಾರೆ. ಈಶ್ವರಪ್ಪ ಮತ್ತು ಕಾಂತೇಶ್ ಅವರು ಹೊಸದುರ್ಗ ತಾಲೂಕಿನ ಚಿಕ್ಕಬಯಲದಕೆರೆಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಹಲವು ಆಸ್ತಿಗಳನ್ನು ಬ್ಯಾಂಕ್‌ನ ಸಾಲದಿಂದ ಖರೀದಿಸಲಾಗಿದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖ ಮಾಡಲಾಗಿದೆ. ಬ್ಯಾಂಕ್‌ನ ಸಾಲವನ್ನು ಮರುಪಾವತಿ ಮಾಡಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ತಿಳಿಸಲಾಗಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಯುಎಇನಲ್ಲಿ ಬೇನಾಮಿ ಕಂಪನಿಗಳನ್ನು ನಡೆಸಲಾಗುತ್ತಿದೆ. ಕೋಟ್ಯಂತರ ರು. ಹಣವನ್ನು ಅಲ್ಲಿ ಹೂಡಿಕೆ ಮಾಡಲಾಗಿದೆ. ಈಶ್ವರಪ್ಪ ಅವರು ಸಚಿವರಾಗಿದ್ದ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ. ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.