
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟಿನ್' ಯೋಜನೆಯನ್ನು ಸಾರ್ವಜನಿಕರಿಗೆ ಅರ್ಪಿಸುವ ಆಗಸ್ಟ್ 15ರ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಆಮಂತ್ರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಉದ್ಯಾನ ನಗರಿ ನಾಗರಿಕರಿಗೆ ಕಡಿಮೆ ದರದಲ್ಲಿ ಊಟ ಹಾಗೂ ತಿಂಡಿ ನೀಡುವ ಸಲುವಾಗಿ ನಗರದ 198 ವಾರ್ಡ್‌ನಲ್ಲೂ ತಲಾ ಒಂದು ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ, ಕೆ.ಆರ್. ಮಾರುಕಟ್ಟೆಯಲ್ಲಿ ಹೆಚ್ಚುವರಿ ಕ್ಯಾಂಟಿನ್ ಸೇರಿದಂತೆ ಒಟ್ಟು 200 ಕ್ಯಾಂಟಿನ್ ನಿರ್ಮಿಸಲು ಈಗಾಗಲೇ ರಾಜ್ಯ ಸರ್ಕಾರ ಸಿದ್ಧತೆ ಪ್ರಾರಂಭಿಸಿದೆ. ಆಗಸ್ಟ್ 15ರಂದು ಯೋಜನೆಗೆ ಚಾಲನೆ ದೊರೆಯ ಲಿದ್ದು ‘ಅತ್ತೆ ಹೆಸರಿನಲ್ಲಿ (ಇಂದಿರಾಗಾಂಧಿ) ಅನುಷ್ಠಾನಗೊಳ್ಳುತ್ತಿ ರುವ ಯೋಜನೆಗೆ ಚಾಲನೆ ನೀಡಲು ಸೊಸೆ ಸೋನಿಯಾಗಾಂಧಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಹೈಕಮಾಂಡ್‌ಗೂ ಮಾಹಿತಿ ನೀಡಿದ್ದಾರೆ. ಆದರೆ ಹೈಕಮಾಂಡ್‌ನಿಂದ ಇನ್ನೂ ಅಧಿಕೃತ ಒಪ್ಪಿಗೆ ಇನ್ನು ದೊರೆಯಬೇಕಿದೆ.
ಒಂದು ವೇಳೆ ಸೋನಿಯಾ ಗಾಂಧಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿದರೇ ಬೃಹತ್ ಕಾರ್ಯಕ್ರಮದ ಮೂಲಕ ಇಂದಿರಾ ಕ್ಯಾಂಟಿನ್ ಉದ್ಘಾಟಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ 50 ಸಾವಿರ ಮಂದಿ ಮಹಿಳೆಯರನ್ನು ಸೇರಿಸಲು ಅಗತ್ಯಸಿದ್ಧತೆ ನಡೆಸುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೇ ಹೆಬ್ಬಾಳ್ಕರ್ ಅವರಿಗೆ ಕೆಪಿಸಿಸಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಕಾಮಗಾರಿ ಪ್ರಾರಂಭ: ಈಗಾಗಲೇ 200 ಕಡೆಗಳಲ್ಲಿ ಕ್ಯಾಂಟಿನ್ ಕಾಮಗಾರಿ ಶುರು ಮಾಡಿದ್ದು, 28 ವಿಧಾನಸಭಾ ಕ್ಷೇತ್ರಗಳಲ್ಲೂ ಅಡುಗೆ ಮನೆ ನಿರ್ಮಾಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಕ್ಯಾಂಟಿನ್ ನಿರ್ಮಾಣಕ್ಕೆ 32 ಲಕ್ಷ, ಅಡುಗೆ ಮನೆ ನಿರ್ಮಾಣಕ್ಕೆ 50 ಲಕ್ಷ ಅನುದಾನ ಒದಗಿಸಲಾಗಿದೆ. ಪ್ರಿಕಾಸ್ಟ್ ತಂತ್ರಜ್ಞಾನದಲ್ಲಿ ಕ್ಯಾಂಟಿನ್ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದ್ದು, ಆಗಸ್ಟ್ 1ರ ವೇಳೆಗೆ ಕ್ಯಾಂಟಿನ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ.
ನಗರದ ಕಡು ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸಲು ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಲಾಗುತ್ತಿದೆ.
5 ರು.ಗೆ ತಿಂಡಿ ಹಾಗೂ 10 ರು.ಗೆ ಊಟ ಒದಗಿಸಲು ಸರ್ಕಾರ ತೀರ್ಮಾನಿಸಿದ್ದು, ವಾರ್ಡ್ ವ್ಯಾಪ್ತಿಯಲ್ಲಿ ತೀವ್ರ ಜನಜಂಗುಳಿ ಇರುವ ಕಡೆಗಳಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡಲಾಗುವುದು. ಕ್ಯಾಂಟಿನ್‌ಗಳ ನಿರ್ವಹಣೆ ಮೇಲುಸ್ತುವಾರಿಗೆ ಉನ್ನತ ಅಧಿಕಾರ ಸಮಿತಿಯನ್ನೂ ಮುಖ್ಯಮಂತ್ರಿಗಳು ರಚಿಸಿದ್ದಾರೆ. ಯೋಜನೆಯಡಿ ಪ್ರತಿ ಕ್ಯಾಂಟಿನ್‌ನಲ್ಲಿ 250 ಮಂದಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ನೀಡಲಾಗುವುದು. ಹೈಟೆಕ್ ಆಗಿ ನಿರ್ಮಾಣಗೊಳ್ಳುತ್ತಿರುವ ಕ್ಯಾಂಟಿನ್‌ನಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಸಿಸಿ ಟಿವಿ ಅಳವಡಿಕೆ, ಒಂದು ಬಾರಿಗೆ 70-80 ಊಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.