
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜೇಷ್ಠತೆ ಆಧಾರದಲ್ಲಿ ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ನಿವೇಶನ ಕಲ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ.
ಈ ಕುರಿತು ಶುಕ್ರವಾರ ನಡೆಯಲಿರುವ ಬಿಡಿಎ ಮಂಡಳಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಕೆಂಪೇಗೌಡ, ಅರ್ಕಾವತಿ, ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಂಗವಿಕಲರಿಗೆ ನಿವೇಶನ ನೀಡುವ ಉದ್ದೇಶ ಹೊಂದಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಭೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಬೆಳ್ಳಂದೂರು, ವರ್ತೂರು ಕೆರೆಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳುವ ಕುರಿತು ಗಂಭೀರ ಚರ್ಚೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರಿಂದ ಹಣ ಸಂದಾಯ ಮಾಡಿಸಿಕೊಂಡಿರುವ ಬಿಡಿಎ, ಈವರೆಗೆ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಹೀಗಾಗಿ, ಕುಡಿಯುವ ನೀರು ಮತ್ತು ಒಳ ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಕಳೆದ ಸಭೆಯಲ್ಲಿ ಮೈಸೂರು ರಸ್ತೆಯಿಂದ ಬಡಾವಣೆಗೆ ರಸ್ತೆ ಮಾಡುವ ಕುರಿತು ಚರ್ಚಿಸಿತ್ತು. ಈ ಸಭೆಯಲ್ಲಿ ಕುಡಿಯುವ ನೀರು ಮತ್ತು ಒಳ ಚರಂಡಿ ಚರ್ಚೆಗೆ ಗಮನ ನೀಡಿದೆ.
ಇನ್ನು ರಾಷ್ಟ್ರಮಟದಲ್ಲಿ ಸುದ್ದಿಯಾಗಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ನೊರೆ ಹಾಗೂ ಕೆರೆ ಸ್ವಚ್ಛತೆ ವಿಷಯ ಕೂಡ ಚರ್ಚೆಯಾಗಲಿದೆ. ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ತಜ್ಞರು ಕೆರೆ ವೀಕ್ಷಣೆ ಮಾಡಿದ್ದು, ಯಾವ ರೀತಿಯಲ್ಲಿ ಸ್ವಚ್ಛತೆ ಕೈಗೊಳ್ಳಬೇಕು ಎಂಬುದನ್ನು ಸಲಹೆ ನೀಡಿತ್ತು. ಹೀಗಾಗಿ, ಸಭೆಯಲ್ಲಿ ವರ್ತೂರು ಕೆರೆ ಸ್ವಚ್ಛತೆಗೆ ಟೆಂಡರ್ ಕರೆಯುವ ಸಾಧ್ಯತೆಗಳಿವೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.