ಇಂದಿರಾ ಕ್ಯಾಂಟೀನ್'ನಲ್ಲಿ ಕಾಫಿ, ಟೀ, ಮುದ್ದೆ?

By Suvarna Web DeskFirst Published Jan 19, 2018, 11:05 AM IST
Highlights

ಉದ್ಯಾನ ನಗರಿಯಲ್ಲಿ ಬಡ ಜನರಿಗೆ ಕಡಿಮೆ ದರದಲ್ಲಿ  ಊಟ, ತಿಂಡಿ ಪೂರೈಸುತ್ತಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳ ಮೆನುವಿನಲ್ಲಿ ಟೀ, ಕಾಫಿ ಮತ್ತು ರಾಗಿ ಮುದ್ದೆ ಸೇರಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಬೆಂಗಳೂರು (ಜ.19): ಉದ್ಯಾನ ನಗರಿಯಲ್ಲಿ ಬಡ ಜನರಿಗೆ ಕಡಿಮೆ ದರದಲ್ಲಿ  ಊಟ, ತಿಂಡಿ ಪೂರೈಸುತ್ತಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳ ಮೆನುವಿನಲ್ಲಿ ಟೀ, ಕಾಫಿ ಮತ್ತು ರಾಗಿ ಮುದ್ದೆ ಸೇರಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಮಧ್ಯಾಹ್ನ ಮತ್ತು ರಾತ್ರಿ ಊಟದ ವೇಳೆ ಇರುವ ಮೆನುವಿನಲ್ಲಿ ಅನ್ನ ಸಾಂಬರ್ ಜತೆಗೆ ಮುದ್ದೆಯನ್ನು  ಸೇರ್ಪಡೆಗೊಳಿಸುವುದು. ಜತೆಗೆ ಬೆಳಗ್ಗೆ ಮತ್ತು ಸಂಜೆ ಎರಡು ವೇಳೆ ಗ್ರಾಹಕರಿಗೆ ೧.೫೦ ರು. ಅಥವಾ 2 ರೂ.ಗೆ ಒಂದು ಟೀ ಅಥವಾ ಒಂದು ಕಾಫಿ ನೀಡಲು ಪಾಲಿಕೆ ಆಲೋಚನೆ ನಡೆಸಿದೆ.

ಪ್ರಸ್ತುತ ಬಿಬಿಎಂಪಿಯ ೧೯೮ ವಾರ್ಡುಗಳ ಪೈಕಿ ಈಗಾಗಲೇ ೧೫೫ಕ್ಕೂ ಹೆಚ್ಚು ಕಡೆ ಇಂದಿರಾ ಕ್ಯಾಂಟೀನ್'ಗಳನ್ನು ಆರಂಭಿಸಲಾಗಿದೆ. ಕ್ಯಾಂಟೀನ್ ತೆರೆಯಲು ಸ್ಥಳಾವಕಾಶ ಸಿಗದ 24 ವಾರ್ಡ್‌ಗಳಲ್ಲಿ ಜ.26 ರಂದು ಸಂಚಾರಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಉಳಿದ ಕೆಲ ವಾರ್ಡುಗಳಲ್ಲಿ ಇಂದಿರಾ ಕ್ಯಾಂಟೀನ್‌'ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ವಾರ್ಡ್‌ಗಳಲ್ಲೂ ಕ್ಯಾಂಟೀನ್‌ಗಳ ಆರಂಭ ಪೂಣಗೊಂಡ ಬಳಿಕ ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ರಾಗಿ ಮುದ್ದೆ ಸೇರಿಸುವುದು ಮತ್ತು ಬೆಳಗ್ಗೆ ಹಾಗೂ ಸಂಜೆ ಟೀ ಮತ್ತು ಕಾಫಿ ಆರಂಭಿಸುವ ಯೋಚನೆ ಇದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಗಂಟೆಗೆ 250 ಮುದ್ದೆ ತಯಾರಿ ಯಂತ್ರ:

ಈ ನಿಟ್ಟಿನಲ್ಲಿ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ)ಗೆ ಭೇಟಿ ನೀಡಿ ಆ ಸಂಸ್ಥೆಯು ಸಂಶೋಧಿಸಿರುವ ಮುದ್ದೆ ಮಾಡುವ ಯಂತ್ರವನ್ನು ಪರಿಶೀಲಿಸಿಕೊಂಡು ಬಂದಿದ್ದಾರೆ. ‘ಸಿಎಫ್‌ಟಿಆರ್‌ಐ ಸಂಶೋಧಿತ ಯಂತ್ರಕ್ಕೆ ರಾಗಿ ಹಿಟ್ಟು ಹಾಕಿದರೆ ಅದರಿಂದ ಮುದ್ದೆ ತಯಾರಾಗಿ  ಹೊರಬರುತ್ತದೆ. ಒಂದು ಯಂತ್ರದಿಂದ ಪ್ರತಿ ಗಂಟೆಗೆ 250 ಮುದ್ದೆ ತಯಾರಿಸಬಹುದಾಗಿದೆ. ಪ್ರತಿ ಯಂತ್ರದ ಖರೀದಿಗೆ 1.50 ಲಕ್ಷ ರು. ವೆಚ್ಚವಾಗಲಿದೆ.

ಮೈಸೂರಿನಲ್ಲಿರುವ ಸಿಎಫ್‌ಟಿಆರ್‌ಐ ಸಂಸ್ಥೆಗೆ ಭೇಟಿ ನೀಡಿ ನಮ್ಮ ಅಧಿಕಾರಿಗಳು ಮಾಹಿತಿ ಕಲೆಹಾಕಿಕೊಂಡು ಬಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ೧೯೮ ಇಂದಿರಾ ಕ್ಯಾಂಟೀನ್‌ಗಳಿಗೆ ನಿತ್ಯ ಎಷ್ಟು ಮುದ್ದೆ ಸರಬರಾಜು ಮಾಡಬೇಕಾಗುತ್ತದೆ. ಎಷ್ಟು ಯಂತ್ರಗಳನ್ನು ಖರೀದಿಸಬೇಕಾಗುತ್ತದೆ’ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಟೀ, ಕಾಫಿ ನೀಡುವ ಪ್ರಸ್ತಾವನೆಯೂ ಪರಿಶೀಲನಾ ಹಂತದಲ್ಲಿದೆ. 1.50 ರು. ನಿಂದ 2 ರು.ಗೆ ಒಂದು ಟೀ ಅಥವಾ ಕಾಫಿ ನೀಡುವ ಚಿಂತನೆ ನಡೆದಿದೆ. ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ನಿತ್ಯ 2 ಲಕ್ಷ ಮುದ್ದೆ ಬೇಕು:

ಪ್ರತಿ ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಸರಾಸರಿ 900 ರಿಂದ 1000 ಜನರು ಊಟ ಮಾಡುತ್ತಿದ್ದಾರೆ. ಹಾಗಾಗಿ 198 ವಾರ್ಡ್‌ಗಳ ಇಂದಿರಾ ಕ್ಯಾಂಟೀನ್'ಗಳಲ್ಲಿ ಈ ಎರಡು ಹೊತ್ತು ಊಟಕ್ಕೆ ಮುದ್ದೆ ನೀಡಲು ನಿತ್ಯ 2 ಲಕ್ಷ ಮುದ್ದೆಗಳನ್ನು ತಯಾರಿಸುವ ಅಗತ್ಯವಿದೆ. ಹಾಗಾಗಿ ಕನಿಷ್ಠ 75 ರಿಂದ 80 ಯಂತ್ರಗಳನ್ನಾದರು ಖರೀದಿಸಬೇಕಾಗುತ್ತದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ವಿಧವಿಧ ತಿಂಡಿ ಲಭ್ಯ:

ಪ್ರಸ್ತುತ ಆರಂಭವಾಗಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿ ದಿನ ಬೆಳಗ್ಗೆ ತಿಂಡಿಗೆ ಇಡ್ಲಿ ಅಥವಾ ಸೋಮವಾರ ಪುಳಿಯೊಗರೆ, ಮಂಗಳವಾರ ಖಾರಬಾತ್, ಬುಧವಾರ ಪೊಂಗಲ್, ಗುರುವಾರ ರವಾ-ಕಿಚಡಿ, ಶುಕ್ರವಾರ ಚಿತ್ರಾನ್ನ, ಶನಿವಾರ ವಾಂಗಿಬಾತ್ ಮತ್ತು ಭಾನುವಾರ ಖಾರಬಾತ್ ಮತ್ತು  ಕೇಸರಿಬಾತ್ ನೀಡಲಾಗುತ್ತಿದೆ. ಇನ್ನು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ ಸಾಂಬರ್ ಮತ್ತು ಮೊಸರನ್ನ ಅಥವಾ ಸೋಮವಾರ ಟಮೊಟೋ ಬಾತ್, ಮಂಗಳವಾರ ಚಿತ್ರಾನ್ನ, ಬುಧವಾರ ವಾಂಗಿಬಾತ್, ಗುರುವಾರ ಬಿಸಿಬೇಳೆ ಬಾತ್, ಶುಕ್ರವಾರ ಮೆಂತ್ಯ ಪುಲಾವ್, ಶನಿವಾರ ಪುಳಿಯೊಗರೆ, ಭಾನುವಾರ ಪುಲಾವ್ ನೀಡಲಾಗುತ್ತಿದೆ. ಇವುಗಳ ಜತೆಗೆ ಮೊಸರನ್ನ ಸಾಮಾನ್ಯವಾಗಿ ದೊರೆಯುತ್ತದೆ.

-ವರದಿ: ಲಿಂಗರಾಜ್ ಕೋರಾ

 

click me!