ಮತ್ತೆ ಮೂರು ಹಗರಣಗಳ ತನಿಖೆಗೆ ಸಿಎಂ ಸೂಚನೆ

By Web DeskFirst Published Sep 28, 2019, 10:32 AM IST
Highlights

 ಬಿಡಿಎ, ಬಿಬಿಎಂಪಿಯಲ್ಲಿನ ಮೂರು ಹಗರಣಗಳ ತನಿಖೆಗೆ ಸಿಎಂ ಆದೇಶ | 2 ತಿಂಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ | ಬಿಜೆಪಿ ಬೆಂಗಳೂರು ನಗರ ವಕ್ತಾರ ಎನ್‌.ಆರ್‌.ರಮೇಶ್‌ ನೀಡಿರುವ ದೂರಿನ ಮೇರೆಗೆ ತನಿಖೆಗೆ ಆದೇಶ 

ಬೆಂಗಳೂರು (ಸೆ. 28): ನಿಯಮಬಾಹಿರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಸಾವಿರಾರು ಬದಲಿ ನಿವೇಶನ ಹಂಚಿಕೆ, ಪಾಲಿಕೆ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ ಮತ್ತು ಅವರ ಕುಟುಂಬದವರ ಹೆಸರಲ್ಲಿ 245 ಬದಲಿ ನಿವೇಶನಗಳ ಹಂಚಿಕೆ ಹಾಗೂ ಬಿಬಿಎಂಪಿ ರಸ್ತೆ ಅಗಲೀಕರಣದಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಬಿಡಿಎ ಮತ್ತು ಬಿಬಿಎಂಪಿಯಲ್ಲಿ ನಡೆದಿರುವ ಮೂರು ಹಗರಣ ಕುರಿತು ಬಿಜೆಪಿ ಬೆಂಗಳೂರು ನಗರ ವಕ್ತಾರ ಎನ್‌.ಆರ್‌.ರಮೇಶ್‌ ನೀಡಿರುವ ದೂರಿನ ಮೇರೆಗೆ ತನಿಖೆಗೆ ಆದೇಶಿಸಲಾಗಿದೆ. ಎರಡು ತಿಂಗಳಲ್ಲಿ ಹಗರಣದ ಸತ್ಯಾಸತ್ಯತೆ ಕುರಿತು ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

ಪಿಂಚಣಿಗಾಗಿ ಅ. 17 ಕ್ಕೆ ಬಿಸಿಯೂಟ ನೌಕರರಿಂದ ರಾಜ್ಯಾದ್ಯಂತ ಪ್ರತಿಭಟನೆ

1. ಎಚ್‌.ಶಶಿಧರ್‌ ವರದಿಗೆ ವಿರುದ್ಧವಾಗಿ ಮತ್ತು ಬಿಡಿಎ ನಿಯಮಗಳನ್ನು ಅನುಸರಿಸದೆ ಮಾಜಿ ಪಾಲಿಕೆ ಸದಸ್ಯ ಎ.ಎಂ.ಹನುಮಂತೇಗೌಡ ಮತ್ತವರ ಕುಟುಂಬದ ಸದಸ್ಯರಿಗೆ 600 ಕೋಟಿ ರು. ಮೌಲ್ಯದ 245 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು.

2. ಅಲ್ಲದೇ, 2014-15ರಿಂದ 2017-18ರ ಅವಧಿಯಲ್ಲಿ ಬಿಡಿಎ ನಿಯಮಬಾಹಿರವಾಗಿ ಸಾವಿರಾರು ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಹಾಗೂ ಸಾರ್ವಜನಿಕ ಉದ್ದೇಶದ ಬಳಕೆಗಾಗಿ ಮೀಸಲಿಟ್ಟಿರುವ ನೂರಾರು ಸಿಎ ನಿವೇಶನಗಳನ್ನು ಕತ್ತರಿಸಿ ಹಂಚಿಕೆ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಎರಡು ಪ್ರಕರಣಗಳ ಸಮಗ್ರ ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ.

ರಜೆ ಕೋರಿ ಪೇದೆ ಬರೆದ ಪತ್ರ ವೈರಲ್!

3. ಬಿಬಿಎಂಪಿ ವ್ಯಾಪ್ತಿಯ ಜೆ.ಡಿ.ಮರ ಜಂಕ್ಷನ್‌ನಿಂದ ಕೋಳಿಫಾರಂ ಜಂಕ್ಷನ್‌ವರೆಗಿನ 7.4 ಕಿ.ಮೀ. ಉದ್ದದ ಬನ್ನೇರುಘಟ್ಟರಸ್ತೆ ಮತ್ತು ಇಬ್ಬಲೂರು ಜಂಕ್ಷನ್‌ನಿಂದ ಚಿಕ್ಕಕನ್ನಹಳ್ಳಿ ಜಂಕ್ಷನ್‌ವರೆಗೆ 4.74 ಕಿ.ಮೀ. ಉದ್ದದ ಸರ್ಜಾಪುರ ರಸ್ತೆಯ ಅಗಲೀಕರಣ ಕಾರ್ಯಗಳಲ್ಲಿ ಅನುಮೋದಿತ ಡಿಪಿಆರ್‌ ಪಾಲಿಸದೆ ಮತ್ತು ಸರ್ವಿಸ್‌ ರಸ್ತೆಗಳನ್ನು ನಿರ್ಮಿಸದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವ ಕುರಿತು ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶಿಸಿದ್ದಾರೆ.

click me!