
ಬೆಂಗಳೂರು(ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಇದೀಗ ಅಧಿಕೃತವಾಗಿ ಕಾಂಗ್ರೆಸ್ಸಿಗ!
ಹೌದು, ಡಾ.ಯತೀಂದ್ರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ, ಅವರು ಕಾಂಗ್ರೆಸ್ಸಿಗೆ ಅಧಿಕೃತವಾಗಿ ಪ್ರವೇಶಕ್ಕೆ ನೀಡಿರುವ ವಿಳಾಸ- ಮೈಸೂರು ಜಿಲ್ಲೆ, ವರುಣಾ ತಾಲೂಕಿನ ಸಿದ್ದರಾಮನಹುಂಡಿ.
ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯ ವಿಳಾಸವನ್ನೇ ನೀಡುವ ಮೂಲಕ ಯತೀಂದ್ರ ಅವರು ಅಧಿಕೃತವಾಗಿ ಕಾಂಗ್ರೆಸ್ಸಿಗನಾಗಿ ದಾಖಲಾಗಿದ್ದಾರೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನದ ವೇಳೆ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯತೀಂದ್ರ ಅವರು ವರುಣಾ ಕ್ಷೇತ್ರದ ವಿಳಾಸವನ್ನೇ ನೀಡುವ ಮೂಲಕ ತಮ್ಮ ಮುಂದಿನ ರಾಜಕೀಯ ನಡೆಗೆ ಅನುಕೂಲಕರ ನಡೆಯನ್ನೇ ಇಟ್ಟಿದ್ದಾರೆ. ಅದು- ಮುಂದಿನ ೨೦೧೮ನೇ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸ್ಥಳಾಂತರಗೊಂಡು ತಮ್ಮ ಪುತ್ರ ಯತೀಂದ್ರ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ಕೊಡಿಸುವ ಉದ್ದೇಶ ಹೊಂದಿರುವುದು ರಹಸ್ಯವೇನಲ್ಲ. ಈ ಹಿನ್ನೆಲೆಯಲ್ಲಿ ಯತೀಂದ್ರ ಈಗಾಗಲೇ ವರುಣಾ ಕ್ಷೇತ್ರ ಮಾತ್ರವಲ್ಲದೇ ಇಡೀ ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ. ಯಾವ ಪ್ರಮಾಣದಲ್ಲಿ ಎಂದರೆ ಯತೀಂದ್ರ ಅವರು ಯಾವುದೇ ಸಂವಿಧಾನಿಕ ಅಧಿಕಾರವಿಲ್ಲದೇ ಇದ್ದರೂ ಸರಣಿ ಅಧಿಕಾರಿಗಳ ಸಭೆಯನ್ನು ಮೈಸೂರು ಜಿಲ್ಲೆಯಲ್ಲಿ ನಡೆಸುತ್ತಿದ್ದರು. ಇದು ವ್ಯಾಪಕವಾಗಿ ಸುದ್ದಿಯಾಗಿ ಪ್ರತಿಪಕ್ಷಗಳು ಈ ಬಗ್ಗೆ ಪ್ರಶ್ನಿಸತೊಡಗಿದವು. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ವಸತಿ ಯೋಜನೆಗಳ ವಿಚಕ್ಷಣ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ನೀಡಲಾಯಿತು. ತನ್ಮೂಲಕ ಅಧಿಕಾರಿಗಳ ಸಭೆ ನಡೆಸಲು ಅವರಿಗೆ ಸಂವಿಧಾನಕ ಹುದ್ದೆ ಕಲ್ಪಿಸಿದಂತಾಯಿತು.
ಇದಲ್ಲದೆ, ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಯತೀಂದ್ರ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡರು. ಈ ಉಪ ಚುನಾವಣೆ ಯತೀಂದ್ರ ಪಾಲಿಗೆ ರಾಜಕೀಯ ಆರಂಗೇಟ್ರಂ ಆಗುವಂತೆ ಸ್ಥಳೀಯ ಕಾಂಗ್ರೆಸ್ಸಿಗರು ನೋಡಿಕೊಂಡರು. ಈ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾ ನಿರ್ವಹಣೆ ಹಾಗೂ ಪ್ರಚಾರದ ಬಹುತೇಕ ಹೊಣೆಯನ್ನು ಯತೀಂದ್ರ ಹಾಗೂ ಅವರ ಗೆಳೆಯರ ಗುಂಪು ನಿರ್ವಹಿಸಿತ್ತು.
ಹೀಗೆ ಕ್ರಮೇಣ ರಾಜಕೀಯವಾಗಿ ಸಕ್ರಿಯರಾದ ಯತೀಂದ್ರ ತಮ್ಮ ತಂದೆ ಸಿದ್ದರಾಮಯ್ಯ ಅವರ ಹಾಲಿ ಕ್ಷೇತ್ರ ವರುಣಾದಿಂದ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಬಹುತೇಕ ತಮ್ಮ ಹಳೆಯ ಕ್ಷೇತ್ರವಾದ ಚಾಮುಂಡೇಶ್ವರಿಗೆ ಸ್ಥಳಾಂತರಗೊಳಿಸುವ ಸಾಧ್ಯತೆಯಿದೆ.
ವೃತ್ತಿಯಿಂದ ವೈದ್ಯರಾದ ಡಾ.ಯತೀಂದ್ರ ತಮ್ಮ ಸಹೋದರ ರಾಕೇಶ್ ಅವರ ಅಕಾಲಿಕ ನಿಧನದ ನಂತರ ರಾಜಕೀಯದಲ್ಲಿ ಸಕ್ರಿಯರಾದರು. ಇದಕ್ಕೂ ಮೊದಲು ರಾಕೇಶ್ ಅವರು ಮೈಸೂರು ಜಿಲ್ಲೆಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದರು. ರಾಕೇಶ್ ಅವರಿಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯಿತ್ತು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.