
ಬೆಂಗಳೂರು (ಮಾ. 13): ‘ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು.. ಅಲ್ಲಾಡ್ಸು .. ಅಲ್ಲಾಡ್ಸು’ ಎಂಬ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡ್ಯಾನ್ಸ್ ಮಾಡುತ್ತಿರುವುದು ಎಂಬ ಒಕ್ಕಣೆಯೊಂದಿಗಿನ ವಿಡಿಯೋವೊಂದು ಸಾಮಾಜಿಕ
ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೃತ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಫೇಸ್‌ಬುಕ್‌ನಲ್ಲಿ ಟ್ರೋಲ್ ಮಾಡಿದ್ದು, ಆನಂತರ ಈ ವಿಡಿಯೋ ವೈರಲ್ ಆಗಿದೆ.
ಸಾಕಷ್ಟು ಜನರು ಶೇರ್ ಕೂಡ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಕೆಲವರು ಸಿದ್ದರಾಮಯ್ಯ ಅವರ ಎನರ್ಜಿ ಬಗ್ಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಲೇವಡಿ ಮಾಡಿ ಕಾಮೆಂಟ್ ಹಾಕಿದ್ದರು. ಆದರೆ ನಿಜಕ್ಕೂ ಸಿದ್ದರಾಮಯ್ಯನವರು ಅಲ್ಲಾಡ್ಸು.. ಅಲ್ಲಾಡ್ಸು.. ಹಾಡಿಗೆ ಕುಣಿದಿದ್ದರೇ ಎಂದು ಹುಡುಕ ಹೊರಟಾಗ ನಿಜ ಸಂಗತಿ ಬಯಲಾಗಿದೆ. ವಾಸ್ತವಾಗಿ ಆ ವಿಡಿಯೋದಲ್ಲಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ, ಸಿದ್ದರಾಮಯ್ಯ ಅವರನ್ನೇ ಹೋಲುವ ವ್ಯಕ್ತಿ! ಏಕೆಂದರೆ ಈ ವಿಡಿಯೋ ಬಗ್ಗೆ ಅಣೆಕಟ್ಟೆ ವಿಶ್ವನಾಥ್ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದು, ‘ನಾನು ಭಾಗವಹಿಸಿದ್ದ ಸಿರಿಧಾನ್ಯ ಕುರಿತಾದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೇ ಹೋಲುವ ರೈತರೊಬ್ಬರು ನೃತ್ಯ ಮಾಡಿದ್ದರು. ನಾನದನ್ನು ಲೈವ್ ಮಾಡಿದ್ದೆ. ರೈತರ ಜೀವನೋತ್ಸಾಹ ನೋಡಿ ನಾನೂ ಕುಣಿದಿದ್ದೆ. ಇದೇ ವಿಡಿಯೋವನ್ನು ಬಳಸಿಕೊಂಡು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಾಡ್ಸ್ ಅಲ್ಲಾಡ್ಸ್ ಹಾಡಿಗೆ ಕುಣಿಯುತ್ತಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳು ಎಂಬಂತಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.