ಮೈಸೂರಿಗೆ ಶೀಘ್ರದಲ್ಲೇ ಹೈಟೆಕ್ ಸ್ಪರ್ಶ

By Web DeskFirst Published Oct 20, 2018, 7:17 PM IST
Highlights

ಈ ಬಾರಿ ದಸರೆಯನ್ನು ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳೊಂದಿಗೆ ರೂಪಿಸಲಾಗಿತ್ತು. ಮೈಸೂರು ಅರಮನೆಯ ಎದುರಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರೆ, ಕ್ರೀಡಾಕೂಟ, ಆಹಾರ ಮೇಳ, ಕವಿಗೋಷ್ಠಿಗಳು ನಡೆದವು. 

ಮೈಸೂರು[ಅ.20]: ಮೈಸೂರಿಗೆ ಕೇವಲ ದಸರೆಯಲ್ಲಿ ಮಾತ್ರವಲ್ಲದೇ ವರ್ಷವಿಡಿ ಪ್ರವಾಸಿಗರನ್ನು ಆಕರ್ಷಿಸಲು ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಕಳೆದ ಹತ್ತು ದಿನಗಳಲ್ಲಿ 20 ರಿಂದ 25 ಲಕ್ಷ ಮಂದಿ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಇದೆ. ಫಲಪುಷ್ಪ ಪ್ರದರ್ಶನಕ್ಕೆ 4.50 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಈ ಬಾರಿಯ ದಸರೆ ಯಶಸ್ವಿಯಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.

ಈ ಬಾರಿ ದಸರೆಯನ್ನು ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳೊಂದಿಗೆ ರೂಪಿಸಲಾಗಿತ್ತು. ಮೈಸೂರು ಅರಮನೆಯ ಎದುರಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರೆ, ಕ್ರೀಡಾಕೂಟ, ಆಹಾರ ಮೇಳ, ಕವಿಗೋಷ್ಠಿಗಳು ನಡೆದವು. ಸುಮಾರು 60 ಕಿ.ಮೀ,ಯಷ್ಟು ದೀಪಾಲಂಕಾರ ಮಾಡಲಾಗಿತ್ತು. ಹೀಗಾಗಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಇದಕ್ಕಾಗಿ ಶ್ರಮವಹಿಸಿದ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.

ಕೇವಲ ದಸರೆ ಸಂದರ್ಭದಲ್ಲಿ ಮಾತ್ರವಲ್ಲ ವರ್ಷವಿಡೀ ಪ್ರವಾಸಿಗರನ್ನು ಮೈಸೂರಿಗೆ ಸೆಳೆಯುವಂತೆ ಪ್ರವಾಸೋದ್ಯಮ ಇಲಾಖೆ ಮೂಲಕ ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕಾಗಿ ಈಗಾಗಲೇ ನೀಲನಕ್ಷೆ ತಯಾರಿಸುವಂತೆ ಸೂಚಿಸಲಾಗಿದೆ ಎಂದರು.

ಕೆಆರ್‌ಎಸ್‌ಗೂ ಕೂಡ ಅ.18 ರಂದು ಒಂದೇ ದಿನ ಒಂದು ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಅಲ್ಲಿ ಕೂಡಾ ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುವುದು. ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಸೇರಿಸಿ, ಪ್ರವಾಸೋದ್ಯಮ ಹಬ್ ರೂಪಿಸಲಾಗುವುದು. ಮೈಸೂರಿನಲ್ಲಿ ಪ್ರತಿ ಶನಿವಾರ, ಭಾನುವಾರ, ಸರ್ಕಾರಿ ರಜಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

ಮೈಸೂರು- ಬೆಂಗಳೂರು ರಸ್ತೆ ಕಾಮಗಾರಿ:
ಮೈಸೂರು- ಬೆಂಗಳೂರು ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡಲು ಹತ್ತುಪಥದ ರಸ್ತೆ ನಿರ್ಮಿಸಲಾಗುವುದು. ಈಗಾಗಲೇ ಈ ಸಂಬಂಧ ನಾಲ್ಕು ಸಭೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಎಸ್.ಆರ್. ಶ್ರೀನಿವಾಸ್, ಮಾಜಿ ಸಚಿವ ಎನ್. ಮಹೇಶ್, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಕೆ. ಮಹದೇವ್, ಎಂ. ಅಶ್ವಿನ್ ಕುಮಾರ್, ಡಾ.ಅನ್ನದಾನಿ ಇದ್ದರು.

click me!