ಸಂಪುಟ ಸರ್ಕಸ್'ಗೆ ಇಬ್ರಾಹಿಂ ಹೊಸ ತಿರುವು

By Suvarna Web DeskFirst Published Aug 27, 2017, 9:27 AM IST
Highlights

ವಿಧಾನ ಪರಿಷತ್ತಿನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಸಿ.ಎಂ. ಇಬ್ರಾಹಿಂ ಸಂಪುಟ ಸೇರಲು ತೀವ್ರ ಲಾಬಿ ನಡೆಸುತ್ತಿದ್ದಾರೆ. ಇದರಿಂದಾಗಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಬೆಂಗಳೂರು: ವಿಧಾನ ಪರಿಷತ್ತಿನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಸಿ.ಎಂ. ಇಬ್ರಾಹಿಂ ಸಂಪುಟ ಸೇರಲು ತೀವ್ರ ಲಾಬಿ ನಡೆಸುತ್ತಿದ್ದಾರೆ. ಇದರಿಂದಾಗಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳಲ್ಲಿ ಒಂದನ್ನು ಪರಿಶಿಷ್ಟ ಜಾತಿಯ ಎಡಗೈ ಬಣಕ್ಕೆ ಕೊಡಬೇಕೊ ಅಥವಾ ಬಲಗೈ ಬಣಕ್ಕೆ ನೀಡಬೇಕೊ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಉಳಿದೆರಡು ಸ್ಥಾನಗಳಲ್ಲಿ ಒಂದನ್ನು ಕುರುಬ ಸಮಾಜಕ್ಕೆ ಮತ್ತೊಂದು ಲಿಂಗಾಯತ ಸಮುದಾಯಕ್ಕೆ ಕೊಡಲಾಗುವುದು ಎಂಬ ಮಾತುಗಳು ಸರ್ಕಾರ ಮತ್ತು ಪಕ್ಷದೊಳಗೆ ಕೇಳಿಬಂದಿತ್ತು. ಈಗ ಅಲ್ಪಸಂಖ್ಯಾತ ಸಮುದಾಯದ ಇಬ್ರಾಹಿಂ ಹೆಸರು ಮುಂಚೂಣಿಗೆ ಬಂದಿರುವುದರಿಂದ ಲಿಂಗಾಯತ ಸಮುದಾಯಕ್ಕೆ ಅವಕಾಶ ಕೈತಪ್ಪುವ ಸಾಧ್ಯತೆ ಇದೆ ಎಂದು ಮೂಲಗಳು ವಿವರಿಸಿವೆ.

ರಾಜ್ಯದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಶುಕ್ರವಾರ ಭೇಟಿ ಮಾಡಿದ ಸಂದರ್ಭದಲ್ಲಿ ಇಬ್ರಾಹಿಂ ಹೆಸರನ್ನು ಮುಖ್ಯಮಂತ್ರಿಗಳೇ ಶಿಫಾರಸು ಮಾಡಿದ್ದಾಗಿ ಮೂಲಗಳು ಹೇಳಿವೆ.

ಈಗಾಗಲೇ ಇಬ್ರಾಹಿಂ ಅವರನ್ನು ಪರಿಷತ್ತಿಗೆ ಆಯ್ಕೆ ಮಾಡಿರುವ ಕುರಿತು ಕಾಂಗ್ರೆಸ್‌ನೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಅವರನ್ನು ಸಚಿವರನ್ನಾಗಿ ನೇಮಕ ಮಾಡಿದರೆ ಇನ್ನಷ್ಟು ಅತೃಪ್ತಿ ಭುಗಿಲೇಳಲಿದೆ ಎಂದೂ ಮೂಲಗಳು ಖಚಿತಪಡಿಸಿವೆ.

click me!