ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ

By Web Desk  |  First Published Oct 1, 2019, 1:26 PM IST

ದಸರಾ ಇತಿಹಾಸದ ಅತ್ಯಂತ ಮುಖ್ಯ ಘಟ್ಟವಿಜಯನಗರ ರಾಜವಂಶಕ್ಕೆ ಸಂಬಂಧಿಸಿದೆ. ಅನೇಕ ಸಾಮ್ರಾಜ್ಯಗಳ ಏಳು-ಬೀಳುಗಳ ನಂತರವೂ ಆ ಪ್ರದೇಶದಲ್ಲಿಯ ವಿಜಯದಶಮಿ ಸಂಪ್ರದಾಯ ನಮಗೆ ಇಂದಿಗೂ ಆ ಕಾಲದ ಇತಿಹಾಸ ತಜ್ಞರು ದಾಖಲಿಸಿರುವ ವಿವರಗಳಿಂದಾಗಿ ಲಭ್ಯವಿದೆ.


ದಸರಾ ಮಹೋತ್ಸವಕ್ಕೆ ಶತಶತಮಾನಗಳ ಇತಿಹಾಸವಿದೆ. ಶಿಷ್ಟಸಂರಕ್ಷಣೆ ಹಾಗೂ ದುಷ್ಟನಿಗ್ರಹದ ಆಶಯವನ್ನು ಸಾರುವ ದಸರಾ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಅಶ್ವಯುಜ ಮಾಸದಲ್ಲಿ ಆಚರಿಸಲಾಗುತ್ತದೆ. ಹಿಂದೂ ಧರ್ಮದ ಸಂರಕ್ಷಣೆಗೆ ಕಂಕಣಬದ್ಧರಾಗಿದ್ದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳು ಒಂಭತ್ತು ದಿನಗಳ ಮಹಾನವಮಿ ಆಚರಣೆಗೆ ನಾಂದಿ ಹಾಡಿದ್ದರು. ಸಮೃದ್ಧಿ-ಸುಭಿಕ್ಷದ ಸಂಕೇತವಾದ ಈ ಆಚರಣೆಯೇ ದಸರಾ ಮಹೋತ್ಸವ.

ಕರ್ನಾಟಕ ರಾಜ್ಯವು ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದೊಂದಿಗೆ 409ನೇ ವಿಶ್ವಪ್ರಸಿದ್ಧ ದಸರಾ ಆಚರಿಸಲು ಸನ್ನದ್ಧವಾಗಿದೆ. ಪ್ರಪ್ರಥಮವಾಗಿ, ಈ ಹತ್ತು ದಿನಗಳ ಹಬ್ಬದ ಸಕಲ ಕಾರ್ಯಕ್ರಮಗಳು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ನೆರವೇರಲೆಂದು ನಾನು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ನಿಮ್ಮೆಲ್ಲರಿಗೂ ದಸರಾ ಹಬ್ಬವು ಶುಭಪ್ರದವಾಗಲೆಂದು ಹಾರೈಸುತ್ತೇನೆ.

Latest Videos

undefined

ದಸರಾ ಆಹಾರ ಮೇಳದಲ್ಲಿ 90 ಕ್ಕೂ ಹೆಚ್ಚು ಮಳಿಗೆ..! ಬಾಯಲ್ಲಿ ನೀರೂರಿಸುವಂತಿದೆ ಮೆನು..!

‘ನವರಾತ್ರಿ’ ಎಂದರೆ ಸಂಸ್ಕೃತದಲ್ಲಿ ಒಂಭತ್ತು ರಾತ್ರಿಗಳು ಎಂದರ್ಥ. ಈ ಒಂಭತ್ತು ರಾತ್ರಿ ಮತ್ತು ಹತ್ತು ದಿನಗಳಲ್ಲಿ ದೇವಿಯ ಒಂಭತ್ತು ರೂಪಗಳನ್ನು ಪೂಜಿಸಲಾಗುತ್ತದೆ. 10ನೇ ದಿನವನ್ನು ಸಾಮಾನ್ಯವಾಗಿ ವಿಜಯದಶಮಿ ಎಂದು ಕರೆಯಲಾಗುತ್ತದೆ. ದಂತಕಥೆಯ ಪ್ರಕಾರ, ವಿಜಯದಶಮಿ ದಿನದಂದು ದುರ್ಗೆಯು ಮಹಿಷಾಸುರ ಎಂಬ ರಾಕ್ಷಸನ ಸಂಹಾರ ಮಾಡಿ ಮಹಿಷಾಸುರಮರ್ದಿನಿ ಎಂದು ನಾಮಾಂಕಿತಳಾದಳು. ಮಹಿಷಾಸುರನ ಹೆಸರಿನಿಂದ ಮೈಸೂರು ನಗರ ತನ್ನ ಹೆಸರನ್ನು ಪಡೆದಿದೆ. ಅದೇ ರೀತಿ, ಲಂಕಾಧಿಪತಿ ರಾವಣನ ಸಂಹಾರ ಮಾಡಿದ ಶ್ರೀರಾಮನ ವಿಜಯವನ್ನು ಸಹ ದುಷ್ಟಶಕ್ತಿಯ ನಿಗ್ರಹ ಮತ್ತು ಶಿಷ್ಟಸಂರಕ್ಷಣೆಯ ದ್ಯೋತಕವಾಗಿ ವಿಜಯದಶಮಿಯ ಎಂದು ಆಚರಣೆ ಮಾಡಲಾಗುತ್ತದೆ.

ವಿಜಯನಗರ ಕಾಲದ ದಸರಾ

ದಸರಾ ಇತಿಹಾಸದ ಅತ್ಯಂತ ಮುಖ್ಯ ಘಟ್ಟವಿಜಯನಗರ ರಾಜವಂಶಕ್ಕೆ ಸಂಬಂಧಿಸಿದೆ. ಅನೇಕ ಸಾಮ್ರಾಜ್ಯಗಳ ಏಳು-ಬೀಳುಗಳ ನಂತರವೂ ಆ ಪ್ರದೇಶದಲ್ಲಿಯ ವಿಜಯದಶಮಿ ಸಂಪ್ರದಾಯ ನಮಗೆ ಇಂದಿಗೂ ಆ ಕಾಲದ ಇತಿಹಾಸ ತಜ್ಞರು ದಾಖಲಿಸಿರುವ ವಿವರಗಳಿಂದಾಗಿ ಲಭ್ಯವಿದೆ.

ಇಂದಿಗೂ ಹಂಪಿಯಲ್ಲಿ ಕಾಣುವ ಮಹಾನವಮಿ ದಿಬ್ಬ ವಿಜಯನಗರ ಸಾಮ್ರಾಜ್ಯದ ಕಾಲದ ದಸರಾ ಆಚರಣೆಯ ಕುರುಹಾಗಿ ಉಳಿದಿದೆ. ಇತಿಹಾಸ ತಜ್ಞರು ವಿವರಿಸಿರುವಂತೆ, ಹಿಂದೆ ದಸರಾವು ಧಾರ್ಮಿಕ ಮಹತ್ವ, ಭಕ್ತಿ- ಶ್ರದ್ಧೆ ಹಾಗೂ ಅಪಾರ ಆಸಕ್ತಿಯಿಂದ ಆಚರಿಸಲ್ಪಡುತ್ತಿತ್ತು. ಹಿಂದಿನ ಭವ್ಯ ಇತಿಹಾಸಕ್ಕೆ ಸಾಕ್ಷೀಭೂತವಾಗಿರುವ ಇಂದಿನ ಹಂಪಿಯ ಮಹಾನವಮಿ ದಿಬ್ಬ ಹಾಗೂ ಹಜಾರ ರಾಮ ದೇವಸ್ಥಾನಗಳು ನಮ್ಮ ಕಣ್ಣ ಮುಂದಿವೆ.

ಮಹಾನವಮಿ ದಿಬ್ಬದ ಪಕ್ಕದ ಗೋಡೆಗಳ ಮೇಲೆ ಇರುವ ಭಿತ್ತಿ ಚಿತ್ರಗಳಲ್ಲಿ ಗರಡಿ ಹಾಗೂ ಕುಸ್ತಿಗಳ ಚಿತ್ರಣವಿದೆ. ಅಲ್ಲಿ ಬೇಟೆಗಾರರು, ಕುದುರೆ ವ್ಯಾಪಾರಿಗಳು, ಒಂಟೆ ವ್ಯಾಪಾರಿಗಳು, ವ್ಯಾಯಾಮ ಪಟುಗಳು ಎಲ್ಲರನ್ನೂ ಕಾಣಬಹುದು. ಅಲ್ಲದೆ ಬೀದಿಗಳಲ್ಲಿ ನಡೆಯುತ್ತಿದ್ದ ಕಣ್ಕಟ್ಟು- ಮೋಡಿ- ಇಂದ್ರಜಾಲ ಪಟುಗಳು, ಗಾರುಡಿಗರು, ಭ್ರಮಾ ಸೃಷ್ಟಿಗಾರರು, ನೃತ್ಯ ಪಟುಗಳು, ವಾದ್ಯಗಾರರು, ಗಾಯಕರು, ರಾಜರು, ದ್ವಾರಪಾಲಕರು, ಸೈನ್ಯದ ಮುಖ್ಯಸ್ಥರು ಇವರೆಲ್ಲರ ಭಿತ್ತಿ ಚಿತ್ರಗಳು ಹಿಂದಿನ ಕಾಲದ ವೈಭವದ ದಸರಾ ಆಚರಣೆಗಳ ಬಗ್ಗೆ ಮಾತನಾಡುತ್ತವೆ.

ಮೈಸೂರು ದಸರಾ ಎಷ್ಟೊಂದು ಸುಂದರ! ಇವುಗಳನ್ನು ನೋಡೋದು ಮಿಸ್ ಮಾಡ್ಲೇಬೇಡಿ!

ಹಜಾರ ರಾಮ ದೇವಸ್ಥಾನದ ಗೋಡೆಗಳ ಮೇಲೆ ದಸರಾ ವೈಭವದ ಕಾಲದ ಕಲಾವಿದರು, ವಾದ್ಯಗಾರರು ಇವರೆಲ್ಲರನ್ನೂ ಕಾಣಬಹುದು. ಪೂರ್ವ, ಉತ್ತರ ಹಾಗೂ ಪಶ್ಚಿಮದ ಗೋಡೆಗಳ ಮೇಲೆ ಆನೆಗಳ ಸಾಲುಗಳು, ಒಂಟೆಗಳ ಸಾಲುಗಳು, ಸೈನ್ಯದ ಸರದಾರರ ಪಡೆ, ಸೈನ್ಯದ ಮುಖ್ಯಸ್ಥರ ಪಡೆ, ಕತ್ತಿಗಳು ಹಾಗೂ ಹತ್ತಿರದ ಹಾಗೂ ದೂರ ಪ್ರದೇಶಕ್ಕೆ ಬಳಸುತ್ತಿದ್ದ ಆಯುಧಗಳು, ಬಿಲ್ಲು ಹಾಗೂ ಬಾಣಗಳು, ಇತರ ರಕ್ಷಣಾ ವ್ಯವಸ್ಥೆಯ ವಿವರಗಳು ಈ ದೇವಾಲಯದ ಗೋಡೆಗಳ ಮೇಲೆ ಚಿತ್ರಿಸಲ್ಪಟ್ಟಿವೆ.

ಇವೆಲ್ಲವುಗಳೊಂದಿಗೆ ಅಂದಿನ ಸಾಮ್ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಿರುವ ಸಂದರ್ಭದ ಚಿತ್ರಗಳಲ್ಲಿ ಹಿಂದಿನ ದಸರಾ ವೈಭವದ ಜೀವಂತ ದರ್ಶನವಾಗುತ್ತದೆ. ರತ್ನಾಕರವರ್ಣಿ ಬರೆದಿರುವ ‘ಭರತೇಶ ವೈಭವ’ದ ಮಹಾನವಮಿ ಸಂಧು ಎಂಬ ಅಧ್ಯಾಯದಲ್ಲಿ 14 ಹಾಗೂ 15ನೇ ಶತಮಾನಗಳಲ್ಲಿಯ ದಸರಾ ಆಚರಣೆಯ ವೈಭವದ ಬಗ್ಗೆ ವಿವರಣೆಯಿದೆ.

ಇದಲ್ಲದೆ, ವಿದೇಶಿ ಪ್ರವಾಸಿಗರಾದ ಅಬ್ದುಲ್,  ರಜಾಕ್‌, ಡೊಮಿಂಗೋ ಪಯಸ್‌ ಮತ್ತು ನುನಿಜ್‌ ಅವರು ತಮ್ಮ ಪ್ರವಾಸ ಕಥನಗಳಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆ ಮತ್ತದರ ವೈಭವವನ್ನು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ.

ಪುನರುಜ್ಜೀವನ ಪಡೆದ ಪರಂಪರೆ

ಕ್ರಿ.ಶ.1565ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಯದುವಂಶದ ಮೈಸೂರು ಒಡೆಯರ್‌ ಅದೇ ಉತ್ಸಾಹದಿಂದ ದಸರಾ ಉತ್ಸವವನ್ನು ಪುನರಾರಂಭಿಸಿದರು. ರಾಜ ಒಡೆಯರ್‌​ ಐ(1578-1617) ಕ್ರಿ.ಶ.1610ರಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವ ಪ್ರಾರಂಭಿಸಿದರು. ಒಡೆಯರ್‌ ಶಕ್ತಿ ಪೂಜೆಗೆ ದಸರಾ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ನವರಾತ್ರಿಯಲ್ಲಿ ಅನೇಕ ಆಚರಣೆಗಳನ್ನು ಸಂಯೋಜಿಸಿದರು. ರಾಜ ಒಡೆಯರ್‌ ನವರಾತ್ರಿಯ ಆಚರಣೆಗಾಗಿ ನಿರ್ದಿಷ್ಟನಿಯಮಗಳನ್ನು ರೂಪಿಸಿದ್ದಾರೆ ಎನ್ನಲಾಗಿದೆ.

ಒಡೆಯರ್‌ ರಾಜವಂಶದ ಉತ್ತರಾಧಿಕಾರಿಗಳು ಹಬ್ಬದ ವೈಭವವನ್ನು ಹೆಚ್ಚಿಸುತ್ತಾ ಬಂದಿದ್ದಾರೆ. 1805ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರು ಅರಮನೆಯಲ್ಲಿ ವಿಶೇಷ ದರ್ಬಾರನ್ನು ಸಂಘಟಿಸುವ ಮೂಲಕ ಆಚರಣೆಯ ಭವ್ಯತೆಯನ್ನು ಮತ್ತಷ್ಟುಹೆಚ್ಚಿಸಿದರು. ಹೈದರಾಲಿ-ಟಿಪ್ಪುಸುಲ್ತಾನ್‌ ಆಡಳಿತಾವಧಿಯಲ್ಲಿ ದಸರಾ ಮತ್ತು ಮಹಾನವಮಿ ಕೇವಲ ನಾಮ್‌ಕೆವಾಸ್ತೆ ಆಚರಣೆ ಆಗಿತ್ತು. 1799ರಲ್ಲಿ ಟಿಪ್ಪುಸುಲ್ತಾನ್‌ ನಿಧನದ ನಂತರ ದಸರಾಕ್ಕೆ ಗತಿಸಿಹೋಗಿದ್ದ ಖದರ್‌ ಮತ್ತೆ ಲಭ್ಯವಾಗಿತ್ತು. ದಸರಾ ಉತ್ಸವವನ್ನು ಮೈಸೂರಿಗೆ ಸ್ಥಳಾಂತರಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ದಸರಾ ಉತ್ಸವಕ್ಕೆ ಮತ್ತೆ ವೈಭವದ ವಿಜೃಂಭಣೆ ತಂದುಕೊಡಲು ಕಾರಣಕರ್ತರಾದರು.

ದಸರಾ ಹಬ್ಬವು ಚಾಮರಾಜ ಒಡೆಯರ್‌ ಗಿಅವರ ಆಡಳಿತದಲ್ಲಿ ಸಾಮಾನ್ಯ ಜನರಿಗೆ ಇನ್ನೂ ಹತ್ತಿರವಾಯಿತೆನ್ನಬಹುದು. ಮಹಾರಾಜರು ಸ್ಥಳೀಯ ವಾದ್ಯಗಳಾದ ನಾದಸ್ವರ ಮತ್ತು ಓಲಗವನ್ನು ಪರಿಚಯಿಸಿದ ನಂತರ ಉತ್ಸವವು ಹೆಚ್ಚು ಜನಕೇಂದ್ರಿತವಾಯಿತು. ಸಮಕಾಲೀನ ಯುರೋಪಿಯನ್‌ ವಾದ್ಯವೃಂದದ ಜೊತೆಗೆ ನಾದಸ್ವರ ಮತ್ತು ಓಲಗವನ್ನು ನುಡಿಸಲಾಯಿತು. ಅಲ್ಲದೆ, ಗ್ರೇಟ್‌ ಬ್ರಿಟನ್‌ ರಾಷ್ಟ್ರಗೀತೆ ಜೊತೆಗೆ ರಾಜ್ಯಗೀತೆ ಕಾಯೋ ಶ್ರೀಗೌರಿಯನ್ನು ಸಹ ಹಾಡಲಾಯಿತು.

ತನ್ನ ಪೂರ್ವಜರ ಪರಂಪರೆಯನ್ನು ಮುಂದಕ್ಕೆ ಸಾಗಿಸಿದ ಕೀರ್ತಿ ‘ರಾಜರ್ಷಿ’ ಕೃಷ್ಣರಾಜ ಒಡೆಯರ್‌ ಐ್ಖಅವರಿಗೆ ಸಲ್ಲುತ್ತದೆ. ಕೃಷ್ಣರಾಜ ಒಡೆಯರ್‌ ಭವ್ಯ ದರ್ಬಾರುಗಳನ್ನು ನಡೆಸಿ ಸಾಧಕರನ್ನು ಸನ್ಮಾನಿಸಿದರು. ನಂತರ ಜಯಚಾಮರಾಜ ಒಡೆಯರ್‌ ಅವರ ಅವಧಿಯಲ್ಲಿ ಹಬ್ಬದ ಸಂಪ್ರದಾಯ ಬದಲಾಯಿತು. ಅಂದಿನ ಕೇಂದ್ರ ಸರ್ಕಾರ 1970ರಲ್ಲಿ ಮಹಾರಾಜರ ರಾಜಧನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ನಂತರ 1971ರಿಂದ ದಸರಾ ಹಬ್ಬವು ಸರ್ಕಾರದ ಸಹಯೋಗದೊಂದಿಗೆ ನೆರವೇರತೊಡಗಿತು. ಇದರ ಫಲವಾಗಿ, ಅಂದಿನ ಮಹಾರಾಜ ಜಯಚಾಮರಾಜ ಒಡೆಯರ್‌ ಅವರು ತಮ್ಮ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲೆ ಇಡಲು ಪ್ರಾರಂಭಿಸಿದರು. ಅವರು ಕೊನೆಯ ಬಾರಿಗೆ ಸಿಂಹಾಸನ ಏರಿದ್ದು 1969ರಲ್ಲಿ. ದಸರಾ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನರಾಗಿರುವ ಮಹಾರಾಜರನ್ನು ನೋಡುವುದು ರಮಣೀಯ ದೃಶ್ಯ ಎಂದು ಈಗಲೂ ಜನತೆ ನೆನಪಿಸಿಕೊಳ್ಳುವುದುಂಟು.

ಸರಿಗಮಪ ರುಬೀನಾ ‘ಮಕ್ಕಳ ದಸರಾ’ ಮುಖ್ಯ ಅತಿಥಿ!

ಈ ವರ್ಷದ ವಿಶೇಷ

ದಸರಾ ‘ನಾಡ ಹಬ್ಬ’ ಆದ ನಂತರ ಸರ್ಕಾರಗಳು ಹಬ್ಬವನ್ನು ಅದ್ಧೂರಿಯನ್ನಾಗಿಸಲು ಪ್ರಯತ್ನಿಸುತ್ತಾ ಬಂದಿವೆ. ಉತ್ಸವದ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಯಶಸ್ವಿಗೊಳಿಸಲು ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಈ ವರ್ಷ ನಾವು ಯೋಜಿಸಿರುವ ಕಾರ್ಯಕ್ರಮಗಳು ಮತ್ತು ವ್ಯವಸ್ಥೆಗಳು ದಾಖಲೆ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದೆಂಬುದು ಆಶಯ. ಆ ನಿಟ್ಟಿನಲ್ಲಿ, 10 ದಿನಗಳ ಉತ್ಸವದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಲವು ಬಗೆಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ವರ್ಷವೂ ದಸರಾ ಕಾರ್ಯಕ್ರಮಗಳು ನಿಗದಿತ ಸಿದ್ಧತೆಯ ಪ್ರಕಾರ ನೆರವೇರಲಿವೆ. ‘ರೈತ ದಸರಾ’ ಕಾರ್ಯಕ್ರಮದಲ್ಲಿ ಕೃಷಿಕರು ಆಧುನಿಕ ಉಪಕರಣ, ವಿಧಾನಗಳು, ಶೂನ್ಯ ಹೂಡಿಕೆಯ ಬಗ್ಗೆ ಮಾಹಿತಿ ಪಡೆಯಬಹುದು.

ಈ ವರ್ಷ ಮೈಸೂರು ನಗರ ವಿಶೇಷ ಲೈಟಿಂಗ್‌ನಲ್ಲಿ ಕಂಗೊಳಿಸಲಿದೆ. ನಗರಕ್ಕೆ ವಿಶಿಷ್ಟನೋಟವನ್ನು ನೀಡಲು ವಿಭಿನ್ನ ವರ್ಣಗಳ ಲೈಟಿಂಗ್‌ ವ್ಯವಸ್ಥೆಯನ್ನು 75 ಕಿ.ಮೀ ಉದ್ದದ ರಸ್ತೆ ಮತ್ತು ಮೈಸೂರು ನಗರದ 91 ವೃತ್ತಗಳಲ್ಲಿ ಅಳವಡಿಸಲಾಗಿದೆ. ಈ ವ್ಯವಸ್ಥೆಯು ಪಶ್ಚಿಮ ಬಂಗಾಳದ ದುರ್ಗಾಪೂಜೆಯ ಮಾದರಿಯಲ್ಲಿ ಮೂಡಿಬರುವುದು ಒಂದು ವಿಶೇಷತೆಯೇ ಸರಿ. ಈ ಲೈಟಿಂಗ್‌ ವ್ಯವಸ್ಥೆಯು ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ ಆಚರಣೆ ಮುಗಿಯುವವರೆಗೆ ಮುಂದುವರೆಯುತ್ತದೆ.

ಸಮೃದ್ಧಿ ಸುಭಿಕ್ಷದ ಸಂಕೇತವಾಗಿ, ದುಷ್ಟನಿಗ್ರಹ- ಶಿಷ್ಟರಕ್ಷಣೆಯ ಪ್ರತೀಕವಾಗಿ ಆಚರಿಸುತ್ತಿರುವ ನಾಡ ಹಬ್ಬ ದಸರಾ ಮಹೋತ್ಸವ ಕರ್ನಾಟಕದ ಜನತೆಗೆ ಶಾಂತಿ-ಸಮೃದ್ಧಿ ನೆಮ್ಮದಿಯನ್ನು ನೀಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ.

- ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ 

click me!