ಉಪಮುಖ್ಯಮಂತ್ರಿ ಹುದ್ದೆ ಸಾಧ್ಯತೆ ಬಹುತೇಕ ಇಲ್ಲ!

By Web DeskFirst Published Aug 23, 2019, 11:45 AM IST
Highlights

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆ ಕ್ಷೀಣ | ಇಂದು ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ 

ಬೆಂಗಳೂರು (ಆ. 23): ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆ ಕ್ಷೀಣಿಸಿದ್ದು, ಈ ಬಗ್ಗೆ ಶುಕ್ರವಾರ ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಸಂಪುಟ ವಿಸ್ತರಣೆ: ಬಿಜೆಪಿಯಲ್ಲಿ ಯಾರೂ ಅತೃಪ್ತರಲ್ಲ ಎಂದ ನಳೀನ್ ಕುಮಾರ್

ಉತ್ತರ ಪ್ರದೇಶದ ಮಾದರಿಯಲ್ಲಿ ಜಾತಿ ಸಮೀಕರಣ ಆಧರಿಸಿ ಇಬ್ಬರು ಅಥವಾ ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂಬ ಆಶಯ ಪಕ್ಷದ ವರಿಷ್ಠರಿಗಿದ್ದರೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಅದು ಗೊಂದಲ ಹುಟ್ಟು ಹಾಕಬಹುದು ಎಂಬ ಆತಂಕ ಕಾಣಿಸಿಕೊಂಡಿದೆ. ಕಳೆದ ಬಾರಿ ಉಪಮುಖ್ಯಮಂತ್ರಿ ಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಅವರೂ ಸಂಪುಟದಲ್ಲಿದ್ದಾರೆ. ಅವರನ್ನು ಈಗ ಡಿಸಿಎಂ ಆಗಿ ಮಾಡದಿದ್ದರೆ ಅದು ತಪ್ಪು ಸಂದೇಶ ರವಾನಿಸಬಹುದು. ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಕೂಡ ಸಂಪುಟದಲ್ಲಿದ್ದಾರೆ.

ಇತರರನ್ನು ಉಪಮುಖ್ಯಮಂತ್ರಿ ಗಳನ್ನಾಗಿ ಮಾಡಿ ಶೆಟ್ಟರ್ ಅವರನ್ನು ಕೇವಲ ಸಚಿವರನ್ನಾಗಿ ಉಳಿಸುವುದು ಸರಿಯಾಗುವುದಿಲ್ಲ. ಬಿ.ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಕೂಗು ಅವರ ವಾಲ್ಮೀಕಿ ಸಮುದಾಯದಿಂದ ಪ್ರಬಲವಾಗಿ ಕೇಳಿಬರುತ್ತಲೇ ಇದೆ. ಅನರ್ಹ ಶಾಸಕ ಹಾಗೂ ಮುಂದಿನ ದಿನಗಳಲ್ಲಿ ಸಂಪುಟ ಸೇರುವ ಸಾಧ್ಯತೆಯಿರುವ ರಮೇಶ್ ಜಾರಕಿಹೊಳಿ ಅವರೂ ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿರಿಸಿದ್ದಾರೆ.

ಬಿಜೆಪಿ ಅಧ್ಯಕ್ಷರ ಉಚ್ಚಾಟನೆ ಹೈಡ್ರಾಮಾ!

ಇವರೆಲ್ಲರ ಜೊತೆಗೆ ಹಿರಿಯರಾದ ಗೋವಿಂದ ಕಾರಜೋಳ ಅವರನ್ನೂ ಪರಿಗಣಿಸಬೇಕಾಗುತ್ತದೆ. ಒಟ್ಟು ಆರು ಮಂದಿ ಪ್ರಮುಖರು ಡಿಸಿಎಂ ರೇಸ್‌ನಲ್ಲಿ ಇದ್ದಂತಾಗಲಿದೆ. ಹೀಗಾಗಿ, ಈ ಪೈಕಿ ಒಂದಿಬ್ಬರನ್ನು ಮಾಡಿ ಇನ್ನುಳಿದವರನ್ನು ಬಿಟ್ಟರೆ ಅದು ಮತ್ತೊಂದು ರೀತಿಯ ಗೊಂದಲಕ್ಕೆ ಕಾರಣವಾಗುತ್ತದೆ ಎಂಬ ಆತಂಕ ಪಕ್ಷದ ನಾಯಕರಲ್ಲಿದೆ. ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದೇ ಬೇಡ ಎಂಬ ನಿಲುವು ಪಕ್ಷದಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

click me!