ಅಮಿತ್‌ ಶಾ, ಬಿಎಸ್‌ವೈ ಭೇಟಿ: ಅನರ್ಹ ಶಾಸಕರ ಬಗ್ಗೆ ಚರ್ಚೆ?

By Kannadaprabha NewsFirst Published Sep 23, 2019, 7:28 AM IST
Highlights

ವಿಧಾನಸಭಾ ಉಪ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ದಿಢೀರ್‌ ದೆಹಲಿಗೆ ದೌಡಾಯಿಸಿದ ಮುಖ್ಯಮಂತ್ರಿ, ಅನರ್ಹ ಶಾಸಕರ ವಿಚಾರವಾಗಿಯೇ ಚರ್ಚಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. 

ನವದೆಹಲಿ [ಸೆ.23]:  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಬಿಜೆಪಿ ಅಧ್ಯಕ್ಷರೂ ಆಗಿರುವ ಶಾ ಅವರ ಜತೆಗೆ ನೆರೆ ಪರಿಹಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದ್ದಾಗಿ ಬಿಎಸ್‌ವೈ ಹೇಳಿಕೊಂಡಿದ್ದರೂ, ವಿಧಾನಸಭಾ ಉಪ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ದಿಢೀರ್‌ ದೆಹಲಿಗೆ ದೌಡಾಯಿಸಿದ ಮುಖ್ಯಮಂತ್ರಿ, ಅನರ್ಹ ಶಾಸಕರ ವಿಚಾರವಾಗಿಯೇ ಚರ್ಚಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿಗೆ ಸಂಬಂಧಿಸಿದ ವಿಚಾರಣೆ ನೋಡಿಕೊಂಡು ಮುಂದಿನ ನಡೆ ತೀರ್ಮಾನಿಸೋಣ ಎಂದು ಯಡಿಯೂರಪ್ಪ ಅವರಿಗೆ ಶಾ ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿರುವ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ನಿಗದಿಯಾಗಿದ್ದು ಅನರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಸುಪ್ರೀಂ ಕೋರ್ಟಿನಲ್ಲಿ ಇನ್ನೂ ವಿಚಾರಣೆಯ ಆರಂಭಿಕ ಹಂತದಲ್ಲಿದೆ. ಹೀಗಾಗಿ ಸದ್ಯ ಅನರ್ಹರು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಮುಂದೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಯಡಿಯೂರಪ್ಪ ಅವರು ಶಾರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಹರಾರ‍ಯಣ ಮತ್ತು ಮಹಾರಾಷ್ಟ್ರ ಚುನಾವಣೆಯೊಂದಿಗೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ಘೋಷಣೆಯಾಗಿದ್ದು ಅಚ್ಚರಿ ತಂದಿದೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಿಜೆಪಿ ಸೇರಲು ಉತ್ಸುಕರಾಗಿರುವ ಅನರ್ಹ ಶಾಸಕರ ಸದ್ಯದ ಸ್ಥಿತಿ ಅತಂತ್ರವಾಗಿದೆ ಎಂದು ಶಾ ಅವರಿಗೆ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಸಂದರ್ಭದಲ್ಲಿ ಸೋಮವಾರ ಸುಪ್ರೀಂ ಕೋರ್ಟ್‌ ಏನು ತೀರ್ಪು ನೀಡಲಿದೆ ಎಂಬುದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ಶಾ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಎರಡ್ಮೂರು ದಿನದಲ್ಲಿ ಪರಿಹಾರ: ಅನರ್ಹ ಶಾಸಕರ ಬಗ್ಗೆ ಶಾರೊಂದಿಗೆ ಮಾತುಕತೆ ನಡೆದಿರುವುದನ್ನು ಬಿ.ಎಸ್‌.ಯಡಿಯೂರಪ್ಪ ನಿರಾಕರಿಸಿದ್ದಾರೆ. ‘ನಾನು ನೆರೆ ಪರಿಹಾರ ನೀಡುವ ಬಗ್ಗೆ ಶಾ ಅವರ ಜತೆ ಮಾತುಕತೆ ನಡೆಸಿದ್ದು, ಶೀಘ್ರವೇ ನೆರೆ ಪರಿಹಾರ ನೀಡುವ ಭರವಸೆ ಸಿಕ್ಕಿದೆ ಎಂದು ಭೇಟಿ ಬಳಿಕ ಮಾಧ್ಯಮದವರಿಗೆ ತಿಳಿಸಿದರು.

ನೆರೆ ಪರಿಹಾರಕ್ಕೆ ಮೊದಲ ಕಂತಿನ ಹಣ ನೀಡುವಂತೆ ಅಮಿತ್‌ ಶಾ ಅವರಲ್ಲಿ ಮನವಿ ಮಾಡಿದ್ದೇನೆ. ಈ ಹಿಂದೆ .2000 ಕೋಟಿ ಪರಿಹಾರ ನೀಡುವಂತೆ ಕೇಳಿದ್ದೆ. ಆ ಬಳಿಕ ಖುದ್ದು ಶಾ ಸೇರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯದ ನೆರೆ ವೀಕ್ಷಣೆ ಮಾಡಿದ್ದಾರೆ. ಎರಡ್ಮೂರು ದಿನದಲ್ಲಿ ಪರಿಹಾರ ಹಣ ಬಿಡುಗಡೆಯಾಗಲಿದೆ’ ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೆರೆ ಪರಿಹಾರ ಘೋಷಿಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಪ್ರಧಾನಿ ಸದ್ಯ ವಿದೇಶ ಪ್ರವಾಸದಲ್ಲಿದ್ದು, ಪ್ರಧಾನಿ ವಾಪಸ್‌ ಬಂದ ಬಳಿಕ ಹಣ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನೆರೆ ಪರಿಹಾರ ಘೋಷಣೆ ಮಾಡುವ ಅಗತ್ಯವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ತಮ್ಮ ಅಸಮ್ಮತಿಯನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಅವರು ಆ ರೀತಿ ಮಾತನಾಡಬಾರದಿತ್ತು. ಅವರ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

click me!