ಸಂತ್ರಸ್ತರಿಗೆ ನೆರವಾಗಲು ಸರ್ಕಾರದ ಜತೆ ಕೈಜೋಡಿಸಿ

By Web DeskFirst Published Aug 16, 2019, 8:29 AM IST
Highlights

ರಾಜ್ಯವು ಅತಿವೃಷ್ಟಿಹಾಗೂ ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿದೆ. ಬರ ಹಾಗೂ ಭಾರೀ ಪ್ರಮಾಣದ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗಲು ಸರ್ಕಾರದ ಜತೆಗೆ ಶ್ರೀಸಾಮಾನ್ಯರು ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೆಂಗಳೂರು (ಆ. 16): ರಾಜ್ಯವು ಅತಿವೃಷ್ಟಿಹಾಗೂ ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿದೆ. ಬರ ಹಾಗೂ ಭಾರೀ ಪ್ರಮಾಣದ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗಲು ಸರ್ಕಾರದ ಜತೆಗೆ ಶ್ರೀಸಾಮಾನ್ಯರು ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಗುರುವಾರ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ 73ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದ ಸಾವಿರಾರು ಕೋಟಿ ರು. ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.

ಸಂತ್ರಸ್ತರಿಗೆ ನೆರವಾಗಲು ಅದ್ಧೂರಿ ಗೃಹಪ್ರವೇಶ ರದ್ದು!

ಪ್ರವಾಹ, ಮಳೆ ಮತ್ತು ಭೂ ಕುಸಿತದಿಂದ ಹಾನಿಗೊಳಗಾಗಿರುವ ಮನೆಗಳನ್ನು ಅಗತ್ಯವಿದ್ದರೆ ದುರಸ್ತಿ ಇಲ್ಲವೇ, ಪುನರ್‌ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹಾನಿಯ ಅಂದಾಜು ಮಾಡಲಾಗುತ್ತಿದ್ದು, ಕೇಂದ್ರಕ್ಕೆ ಈಗಾಗಲೇ ಸಲ್ಲಿಸಿರುವ ನೆರವಿನ ಕೋರಿಕೆ ಮನವಿಗಳನ್ನು ಪರಿಷ್ಕೃತಗೊಳಿಸಿ ಮತ್ತೊಮ್ಮೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯವು ಕಳೆದ 45 ವರ್ಷಗಳಲ್ಲಿ ಕಂಡರಿಯದ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದೆ. ಸುಮಾರು ಅರ್ಧ ರಾಜ್ಯ ಜಲಪ್ರಳಯಕ್ಕೆ ಒಳಗಾಗಿದೆ. 22 ಜಿಲ್ಲೆಗಳ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದಿಂದಾಗಿ ಈವರೆಗೆ 61 ಮಂದಿ ಮೃತಪಟ್ಟಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರು.ಪರಿಹಾರ ನೀಡಲಾಗಿದೆ. ಪ್ರವಾಹದ ನಡುವೆಯೂ ಐದು ಜಿಲ್ಲೆಗಳ ಬಹುತೇಕ ಭಾಗದಲ್ಲಿ ಮಳೆಯಾಗದೆ ಬರ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ಪ್ರವಾಹದಲ್ಲಿ ಸಿಲುಕಿದ್ದ 6,97,948 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 859 ಜಾನುವಾರುಗಳು ಸಾವನ್ನಪ್ಪಿದ್ದು, 51,460 ಜಾನುವಾರುಗಳನ್ನು ರಕ್ಷಿಸಲಾಗಿದೆ. 1,224 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಆಹಾರ, ವಸ್ತ್ರ, ಹೊದಿಕೆ, ಔಷಧ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. 3,96,617 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದರು.

ಕರಾವಳಿ ಹೊರತುಪಡಿಸಿ ಉಳಿದೆಡೆ ಮಳೆ ಕ್ಷೀಣ

ಸುಮಾರು 4.69 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಹಾನಿ ಸಂಭವಿಸಿದೆ. 58,620 ಮನೆಗಳಿಗೆ ಹಾನಿಯಾಗಿದೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈಮಾನಿಕ ಸಮೀಕ್ಷೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು ಮತ್ತು ಗದಗ ಜಿಲ್ಲೆಗಳಲ್ಲಿ ಸಂಚರಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ಲರಿಗೂ ಧನ್ಯವಾದಗಳು:

ಅಧಿಕಾರಿಗಳು, ಶಾಸಕರು, ಸಂಸದರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮಾನವೀಯ ಕಾಳಜಿಯುಳ್ಳ ಜನರು ಆಪತ್ಭಾಂದವರಂತೆ ನೆರವು ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರು ಕೂಡ ಪರಿಹಾರ ಕಾರ್ಯಗಳಿಗೆ ಸಹಕರಿಸಿದ್ದಾರೆ ಎಂದು ಧನ್ಯವಾದಗಳನ್ನು ತಿಳಿಸಿದರು.

ಸಂತ್ರಸ್ತರಿಗೆ ತಕ್ಷಣದ ನೆರವಿಗೆ ಹತ್ತು ಸಾವಿರ ರು., ಮನೆ ಸಂಪೂರ್ಣವಾಗಿ ಕಳೆದುಕೊಂಡವರಿಗೆ ಐದು ಲಕ್ಷ ರು. ಹಾಗೂ ಮನೆ ದುರಸ್ತಿ ಮಾಡಿಸಿಕೊಳ್ಳಲು ಒಂದು ಲಕ್ಷ ರು.ಗಳ ನೆರವು ನೀಡಲು ಘೋಷಿಸಲಾಗಿದೆ.

ಕೊಳಗೇರಿ ಮನೆಗಳು ಹಾಗೂ ಮೂಲ ಸೌಲಭ್ಯಗಳಿಗೆ ತೀವ್ರ ಹಾನಿಯಾಗಿದ್ದು, ನಿವಾಸಿಗಳ ಬದುಕು ದುಸ್ತರವಾಗಿದೆ. ಕೊಳಗೇರಿ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿ ಕೊಡುವುದು, ರಸ್ತೆ, ಒಳಚರಂಡಿ, ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಿಸಲು ಸರ್ಕಾರವು ತಕ್ಷಣವೇ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

click me!