
ಕೊಳ್ಳೆಗಾಲ(ಜು.27): ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾವೇರಿ ವನ್ಯಜೀವಿಧಾಮ ಹಾಗೂ ಮಲೆಮಹದೇಶ್ವರಬೆಟ್ಟ ವನ್ಯಜೀವಿಧಾಮಗಳಲ್ಲಿ ವನ್ಯಜೀವಿಗಳ ಬೇಟೆ ಇನ್ನು ನಿಂತಿಲ್ಲ. ವೀರಪ್ಪನ್ ಇಲ್ಲವಾದರೂ ಆತನ ಸಂತತಿ ಆಗಾಗ ಕಾಡು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ವನ್ಯಜೀವಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಹನೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಒಬ್ಬ ಬೇಟೆಗಾರ ಬಂದೂಕು ಹಿಡಿದು ಅರಣ್ಯ ಪ್ರವೇಶಿಸಿರುವುದು ಹಾಗೂ ಮತ್ತೊಂದರಲ್ಲಿ ಇಬ್ಬರು ಬೇಟೆಗಾರರು ಕಾಡು ಪ್ರಾಣಿಯ ಮಾಂಸವನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿವೆ.
ಅಲ್ಲದೇ ಈ ಬೇಟೆಗಾರರು ಅರಣ್ಯದಲ್ಲಿ ಉರುಳು ಹಾಕುವ ಮೂಲಕ ಸಹ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದು, ಉರುಳಿನ ಕುಣಿಕೆಗೆ ಸಿಲುಕಿ ಜಿಂಕೆಯೊಂದು ಮೃತಪಟ್ಟಿರುವ ದೃಶ್ಯ ಸಹ ಕ್ಯಾಮರಾದಲ್ಲಿ ಸೆರೆಯಾಗಿದೆ. ವೀರಪ್ಪನ್'ನಂತೆ ಆತನ ಸಂತತಿ ದೊಡ್ಡ ದೊಡ್ಡ ಆನೆಗಳನ್ನು ಕೊಲ್ಲದಿರಬಹುದು. ಆದರೆ ಜಿಂಕೆ,ಕಡವೆಯಂತಹ ಸಣ್ಣಪುಟ್ಟ ಪ್ರಾಣಿಗಳನ್ನೇ ಬೇಟೆಯಾಡುತ್ತಲೇ ಇರುವುದು ವನ್ಯಜೀವಿ ಪ್ರಿಯರಲ್ಲಿ ಆತಂಕ ಉಂಟುಮಾಡಿದೆ. ವೀರಪ್ಪನ್ ಇದ್ದ ಕಾಲಕ್ಕೆ ಹೋಲಿಸಿದರೆ ಸದ್ಯ ಅರಣ್ಯ ಇಲಾಖೆ ಅರಣ್ಯದ ರಕ್ಷಣೆಗೆ ಸಾಕಷ್ಟು ಸುಧಾರಿತ ಕ್ರಮಗಳನ್ನು ಕೈಗೊಂಡಿದೆ. ಇಷ್ಟಿದ್ದರೂ ಬೇಟೆಗಾರರು ಯಾವುದೇ ಅಳುಕಿಲ್ಲದೇ ಕಾಡು ಪ್ರವೇಶಿಸಿ ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.