iPhone ಶೋಕಿಗಾಗಿ ಕಿಡ್ನಿಯನ್ನೇ ಮಾರಿದ ಬಾಲಕ: ಜೀವಕ್ಕೆ ಕುತ್ತು!

By Web DeskFirst Published Jan 8, 2019, 3:58 PM IST
Highlights

iPhone ಶೋಕಿಗಾಗಿ 17 ವರ್ಷದ ಬಾಲಕನೊಬ್ಬ ಕಿಡ್ನಿಯನ್ನೇ ಮಾರಾಟ ಮಾಡಿದ್ದು, ಸದ್ಯ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾನೆ. 

ಬೀಜಿಂಗ್[ಜ.08): iPhone ಬಲು ದುಬಾರಿ, ಹೀಗಿದ್ದರೂ ಯುವಜನರಿಗೆ ಕೈಯ್ಯಲ್ಲೊಂದು ಐಫೋನ್ ಇರಬೇಕೆಂಬ ಮಹದಾಸೆ. ಯಾವಾಗೆಲ್ಲಾ ಹೊಸ ಫೋನ್ ಲಾಂಚ್ ಆಗುತ್ತದೋ ಆವಾಗೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಖರೀದಿಸಲು ಕಿಡ್ನಿಯನ್ನೇ ಮಾರಬೇಕು ಎಂಬ ಜೋಕ್ ಸಾಮಾನ್ಯವಾಗಿ ಓದಲು ಸಿಗುತ್ತದೆ. ಆದರೆ ಚೀನಾದ ಒಬ್ಬ ಹುಡುಗ ಬಹುಶಃ ಈ ಜೋಕನ್ನು ಗಮಭೀರವಾಗಿ ಪರಿಗಣಿಸಿರಬೇಕು. ಹೀಗಾಗಿಯೇ ಕಿಡ್ನಿ ಮಾರಿ ಐಫೋನ್ ಖರೀದಿಸಲು ನಿರ್ಧರಿಸಿದ್ದು, ಒಂದು ಕಿಡ್ನಿಯನ್ನೂ ಮಾರಿದ್ದಾನೆ. 

ಹೌದು iPhone 4 ಬಿಡುಗಡೆಯಾದ ಬಳಿಕ ಇದೊಂದು ಅಂತಸ್ಥಿನ ವಿಚಾರವಾಯ್ತು. ಐಫೋನ್ ಪ್ರತಿ ವರ್ಷ ಹೊಸ ಫೋನ್‌ಗಳನ್ನು ರಿಲೀಸ್ ಮಾಡುವುದರೊಂದಿಗೆ ಇದರ ಮೌಲ್ಯವನ್ನೂ ಹೆಚ್ಚಿಸುತ್ತಾ ಹೋಯಿತು. ಆದರೆ ಚೀನಾದ 17 ವರ್ಷದ ಜವಾವೋ ಎಂಬ ಬಾಲಕ ಕಾಲೇಜಿನಲ್ಲಿ ಎಲ್ಲರಿಗಿಂತಲೂ ಕೂಲ್ ಆಗಿ ಕಾಣಬೇಕೆಂಬ ಮಹದಾಸೆಯಲ್ಲಿ ಐಫೋನ್ 4 ಖರೀದಿಸಲು ತನ್ನ ಕಿಡ್ನಿಯನ್ನೇ ಮಾರಿದ್ದಾನೆ.

ಕಿಡ್ನಿಯನ್ನೇ ಮಾರಾಟ ಮಾಡಿದ್ದೇಕೆ?

ಮನುಷ್ಯನಿಗೆ ಬದುಕಲು ಎರಡು ಕಿಡ್ನಿಗಳು ಬೇಕೆಂದಿಲ್ಲ, ಒಂದು ಕಿಡ್ನಿ ಇದ್ದರೂ ಬದುಕಲು ಸಾಧ್ಯ ಎಂದು ಜವಾವೋಗೆ ಗೆಳೆಯರು ಮಾತನಾಡುವ ಸಂದರ್ಭದಲ್ಲಿ ಹೇಳಿದ್ದರಂತೆ. ಹೀಗಾಗಿ ಬೇರೇನನ್ನೂ ಯೋಚಿಸದ ಆತ ತನ್ನ 17ನೇ ವಯಸ್ಸಿಗೆ ಕಿಡ್ನಿ ಮಾರಿ ಐಫೋನ್ ಖರೀದಿಸಿದ್ದ. ಸದ್ಯ 24 ವರ್ಷ ವಯಸ್ಸಾಗಿರುವ ಜವಾವೋಗೆ ಬೆಡ್ ಮೇಲಿನಿಂದ ಎದ್ದು ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಡಯಾಲಿಸಿಸ್ ನಿಂದ ಜೀವನ ಸಾಗಿಸುತ್ತಿದ್ದಾನೆ.

ಮಾರಾಟ ಮಾಡಿದ ಕಿಡ್ನಿಗೆ ಆಸ್ಪತ್ರೆ ಸಿಬ್ಬಂದಿ ಆತನಿಗೆ 2.24 ಲಕ್ಷ ನೀಡಲಾಗಿತ್ತು. ಅಲ್ಲದೇ ಕೆಲವೇ ವಾರಗಳೊಳಗೆ ಎಲ್ಲವೂ ಮೊದಲಿನಂತಾಗುತ್ತದೆ ಎಂಬ ಭರವಸೆಯನ್ನೂ ನೀಡಿದ್ದರಂತೆ. ಆದರೆ ಹೀಗಾಗಲಿಲ್ಲ, ಹಾಗೂ ತೆಗೆದುಕೊಂಡ ನಿರ್ಧಾರ ಜೀವಕ್ಕೇ ಮುಳುವಾಗಿದೆ.

ಕಿಡ್ನಿ ಮಾರಾಟ ಮಾಡಿದ ಕೆಲವೇ ದಿನಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ತಪಾಸಣೆ ನಡೆಸಿದಾಗ ಶಸ್ತ್ರಚಿಕಿತ್ಸೆ ಸರಿಯಾಗಿ ಮಾಡಿಲ್ಲ ಹೀಗಾಗಿ ಸೋಂಕು ಉಂಟಾಗಿದೆ ಎಂದು ತಿಳಿದು ಬಂದಿದೆ. ಇಷ್ಟೆಲ್ಲಾ ಆಗುವವರೆಗೂ ಜವಾವೋ ತಂದೆ ತಾಯಿಗೂ ತಮ್ಮ ಮಗ ಕಿಡ್ನಿ ಮಾರಿದ್ದಾನೆಂಬ ವಿಚಾರ ತಿಳಿದಿರಲಿಲ್ಲ. 

ಇದೆಲ್ಲ ನಡೆದ ಕೆಲ ವರ್ಷಗಳ ಬಳಿಕ ಈ ಸೋಂಕು ಉಳಿದೊಂದು ಕಿಡ್ನಿಗೂ ಹರಡಿಕೊಂಡಿದ್ದು, ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪಿದೆ. ಈತನನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ವಿಧಿ ಇಲ್ಲದ ಕುಟುಂಬ ಡಯಾಲಿಸಿಸ್ ಮಾಡಿಸಲು ಹಣ ಕೂಡಿಸಲಾರಂಭಿಸಿದ್ದಾರೆ. ಅಂತಿಮವಾಗಿ ಜವಾವೋಗೆ ನ್ಯಾಯ ಸಿಕ್ಕಿದ್ದು, ಆತನ ಕಿಡ್ನಿ ಖರೀದಿಸಿದ್ದ ಆಸ್ಪತ್ರೆಯೇ ಚಿಕಿತ್ಸೆಯ ವೆಚ್ಚ ಭರಿಸಲು ಮುಂದಾಗಿದೆ.

click me!