ರಾಜ್ಯ ಸರಕಾರದ ಲೆಕ್ಕಪತ್ರದ ಸಮಗ್ರ ತನಿಖೆಯಾಗಲಿ : ರವಿ

By Web DeskFirst Published Dec 8, 2018, 1:17 PM IST
Highlights

ಶಾಸಕ ಸಿ.ಟಿ ರವಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಅಕ್ರಮಗಳದ್ದೇ ಕಾರುಬಾರು ಎಂದು ಆರೋಪಿಸಿದ್ದಾರೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕೂಡ ವಾಗ್ದಾಳಿ ನಡೆಸಿದ್ದಾರೆ. 
 

ಬೆಂಗಳೂರು: ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಅಕ್ರಮಗಳದ್ದೇ ಕಾರುಬಾರು ಎಂದು ಆರೋಪಿಸಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರದ ಅಕ್ರಮದ ಬಗ್ಗೆ ಬಿಜೆಪಿ ಆರೋಪಿಸಿದ್ದು, ಸಿಎಜಿ ವರದಿಯಲ್ಲಿಯೂ ಇದೆ. ಬಜೆಟ್ ಗಾತ್ರ ಹೆಚ್ಚಾದಾಗ ವ್ಯತ್ಯಾಸಗಳಾಗುತ್ತವೆ, ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಆದರಿದು ಜನರ ತೆರಿಗೆ ಹಣವಾಗಿದ್ದು, ಒಂದೊಂದು ಪೈಸೆಗೂ ಸ್ಪಷ್ಟ ಲೆಕ್ಕ ನೀಡಬೇಕೆಂದು, ರವಿ ಆಗ್ರಹಿಸಿದ್ದಾರೆ. 

'13 ಬಾರಿ ಬಜೆಟ್ ಮಂಡಿಸಿರುವ, ಆರ್ಥಿಕ ತಜ್ಞರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸರಕಾರದ ಆಡಳಿತ ವೈಖರಿ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. 'ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ'. ಸರಕಾರದ ಲೆಕ್ಕ ಪತ್ರದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ತನಿಖೆಗಾಗಿ ಸದನ ಸಮಿತಿಯನ್ನೂ ರಚಿಸಬೇಕೆಂದು ಒತ್ತಾಯಿಸಿದ್ದಾರೆ. 

'ತನ್ನ ಕಾರ್ಯವೈಖರಿಯಲ್ಲಿಯೇ ಸಾಕಷ್ಟು ಹುಳುಕು ಇಟ್ಟಿಕೊಂಡಿರುವ ರಾಜ್ಯ ಸರಕಾರ, ಬಿಜೆಪಿ ವಿರುದ್ಧ ಬೊಟ್ಟು ತೋರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ರವಿ,  ಇದೇ ವೇಳೆ,  'ಸಿಎಂ ಕುಮಾರಸ್ವಾಮಿ ಅವರಿಗೆ ಯಾವುದಕ್ಕೆ ಸಿಡಿಮಿಡಿಯಾಗಬೇಕೆಂಬುದೂ ಗೊತ್ತಾಗೋಲ್ಲ. ನಿನ್ನೆ ಕೇಂದ್ರ ಸಚಿವರು ಕೇಂದ್ರದ ಅನುದಾನ ಬಗ್ಗೆ ಮಾತನಾಡಿದರೂ ಅವರು ಸಿಡಿಮಿಡಿಯಾಗುತ್ತಾರೆ,' ಎಂದು ಆರೋಪಿಸಿದ್ದಾರೆ. 

ಇನ್ನು ರಾಜ್ಯಕ್ಕೆ ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬಂದಿದೆ.  ನಾಲ್ಕು ವರ್ಷಗಳಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನಲ್ಲಿ 6ಕ್ಕೂ ಹೆಚ್ಚು ಸಲ ಅನುದಾನ ಬಿಡುಗಡೆಯಾಗಿದೆ.  ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ,' ಎಂದ ರವಿ ಮೋದಿ ಸರಕಾರವನ್ನುಸಮರ್ಥಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಬೆನ್ನಲ್ಲೇ ಏನಿದು ಸಿ.ಟಿ.ರವಿ ಈ ಹೇಳಿಕೆ?

click me!