
ನವದೆಹಲಿ(ಮಾ.10): ಎಂಟು ವರ್ಷಗಳ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳಿಂದ ಸಂಪರ್ಕ ಕಡಿದುಕೊಂಡು, ಅಂತರಿಕ್ಷದಲ್ಲಿ ನಾಪತ್ತೆಯಾಗಿದ್ದ ಭಾರತದ ಮೊದಲ ಚಂದ್ರಯಾನ ನೌಕೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಹಚ್ಚಿದೆ.
ಅಂತರಗ್ರಹ ರಾಡಾರ್ ಎಂಬ ಹೊಸ ತಾಂತ್ರಿಕ ವ್ಯವಸ್ಥೆ ಬಳಸಿ ಇಸ್ರೋದ ಚಂದ್ರಯಾನ-1 ನೌಕೆ ಹಾಗೂ ನಾಸಾದ ಚಂದ್ರ ಶೋಧ ನೌಕೆಯನ್ನು ಪತ್ತೆ ಮಾಡಲಾಗಿದೆ. ಭೂಮಟ್ಟದ ರಾಡಾರ್‌ಗಳ ಮೂಲಕ ಈ ಶೋಧ ಮಾಡಲಾಗಿದೆ ಎಂದು ನಾಸಾದಲ್ಲಿನ ರಾಡಾರ್ ವಿಜ್ಞಾನಿ ಮರೀನಾ ಬ್ರೋಜೋವಿಕ್ ತಿಳಿಸಿದ್ದಾರೆ.
ಸಂಪರ್ಕ ಕಳೆದುಕೊಂಡಿರುವ ನೌಕೆಗಳನ್ನು ಅಂತರಿಕ್ಷದಲ್ಲಿನ ಕಸದ ನಡುವೆ ಹುಡುಕುವುದು ತಾಂತ್ರಿಕವಾಗಿ ಸವಾಲಿನಿಂದ ಕೂಡಿದ ಕೆಲಸ. ಅದರಲ್ಲೂ ಚಂದ್ರನ ಸುತ್ತ ಈ ರೀತಿ ಶೋಧ ಅತ್ಯಂತ ಕಷ್ಟ. ಚಂದ್ರನ ಪ್ರಜ್ವಲತೆಯಿಂದಾಗಿ ಆಪ್ಟಿಕಲ್ ಟೆಲಿಸ್ಕೋಪ್‌ಗಳು ಸಣ್ಣ ಉಪಕರಣಗಳನ್ನು ಪತ್ತೆ ಹಚ್ಚಲು ವಿಲವಾಗುತ್ತವೆ. ಆದರೆ ಅಂತರಗ್ರಹ ರಾಡಾರ್ ಎಂಬ ತಾಂತ್ರಿಕ ಅಪ್ಲಿಕೇಷನ್ ಬಳಸಿ ಚಂದ್ರಯಾನ-1 ನೌಕೆಯನ್ನು ಪತ್ತೆ ಮಾಡಲಾಗಿದೆ.
ಮೊದಲ ಬಾರಿಗೆ ಚಂದ್ರಯಾನ ಕೈಗೊಂಡಿದ್ದ ಇಸ್ರೋ, 2008ರ ಅ.22ರಂದು ಚಂದ್ರಯಾನ-1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿತ್ತು. ಭಾರತ, ಅಮೆರಿಕ, ಬ್ರಿಟನ್, ಜರ್ಮನಿ, ಸ್ವೀಡನ್, ಬಲ್ಗೇರಿಯಾದ 11 ಉಪಕರಣಗಳು ಈ ನೌಕೆಯಲ್ಲಿದ್ದವು. ಚಂದ್ರನ ಸುತ್ತ 3400 ಸುತ್ತುಗಳನ್ನು ಹಾಕಿದ್ದ ಈ ನೌಕೆ, 2009ರ ಆ.29ರಂದು ಸಂಪರ್ಕ ಕಡಿದುಕೊಂಡಿತ್ತು. ಆನಂತರ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಂಗಳಯಾನ ಕೈಗೊಂಡು ವಿಶ್ವವನ್ನು ನಿಬ್ಬೆರಗಾಗಿಸಿದ್ದ ಇಸ್ರೋ, ಈಗ ಚಂದ್ರಯಾನ-2 ಸಿದ್ಧತೆಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.