ಪ್ರಸಾದಕ್ಕೆ ವಿಷ ಹಾಕಿದವರನ್ನು ಸುಟ್ಟು ಹಾಕ್ತೀವಿ

By Web DeskFirst Published Dec 21, 2018, 7:55 AM IST
Highlights

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಡಿ.14ರಂದು ವಿಷಮಿಶ್ರಿತ ಪ್ರಸಾದ ಸೇವಿಸಿ ತಮ್ಮವರನ್ನು ಕಳೆದುಕೊಂಡವರು ಪ್ರಸಾದಕ್ಕೆ ವಿಷ ಬೆರೆಸಿದವರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಹನೂರು :  ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ನಾಲ್ವರನ್ನೂ ನಮ್ಮ ಕೈಗೆ ಕೊಟ್ಟು ಬಿಡಿ, ನಾವೇ ಸುಟ್ಟು ಬಿಡ್ತೇವೆ!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಡಿ.14ರಂದು ವಿಷಮಿಶ್ರಿತ ಪ್ರಸಾದ ಸೇವಿಸಿ ತಮ್ಮವರನ್ನು ಕಳೆದುಕೊಂಡವರ ಆಕ್ರೋಶದ ನುಡಿ ಇದು.

ವಿಷ ಪ್ರಸಾದ ಸೇವಿಸಿ ಮೃತಪಟ್ಟ15 ಮಂದಿಗಾಗಿ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಬ್ರಹ್ಮೇಶ್ವರ ದೇವಾಲಯದ ಮುಂದೆ ಗ್ರಾಮಸ್ಥರು ಗುರುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ವಿಷವಿಕ್ಕಿದ ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.

‘‘ನಮ್ಮ ಕುಟುಂಬದವರಂತೆ ಅವರೂ ನರಳಿ ನರಳಿ ಸಾಯಬೇಕು, ಮಾರಮ್ಮ ಅವರಿಗೆ ಸರಿಯಾದ ಗತಿ ಕಾಣಿಸಬೇಕು. ನೂರಾರು ಮಂದಿಗೆ ವಿಷ ಹಾಕಿದ ಅಂಬಿಕಾ ಹೆಣ್ಣಾಗಿ ಹುಟ್ಟಬಾರದಿತ್ತು. ಅವಳು ಹೆಣ್ಣು ಕುಲಕ್ಕೆ ಮಾರಿ’’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಕಣ್ಣೀರಿಡುತ್ತಾ ಹಿಡಿಶಾಪ ಹಾಕಿದರು. ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ದೇವಸ್ಥಾನದ ಟ್ರಸ್ಟ್‌ ಸದಸ್ಯ ಮಾದೇಶ, ಪತ್ನಿ ಅಂಬಿಕಾ, ಅರ್ಚಕನಾಗಿದ್ದ ದೊಡ್ಡಯ್ಯನ ನೀಚ ಕೃತ್ಯದ ಕುರಿತು ತೀವ್ರ ಕಿಡಿಕಾರಿದರು.

ಈ ವೇಳೆ ಮಾತನಾಡಿದ ಭಾರತೀಯ ಕಿಸಾನ್‌ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಸರ್ಕಾರ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಮಹದೇಶ್ವರನ ಸನ್ನಿಧಿಯಲ್ಲಿ ಹೆಣ್ಣುಮಕ್ಕಳ ಜತೆಗೆ ಅಸಭ್ಯವಾಗಿ ವರ್ತಿಸಬೇಡ ಎಂದು ತಂದೆ ಬುದ್ಧಿಮಾತು ಹೇಳಿದ್ದಕ್ಕೆ ಅವರ ವಿರುದ್ಧವೇ ಇಮ್ಮಡಿ ಮಹದೇವಸ್ವಾಮಿ ತಿರುಗಿಬಿದ್ದಿದ್ದ. ಆತನಿಗೆ ತಂದೆ ನೀಡಿದ ಶಾಪವೇ ಇಂದು ಈ ರೀತಿಯ ಶಿಕ್ಷೆಗೆ ಗುರಿಪಡಿಸಿದೆ. ಮಹದೇಶ್ವರ ಬೆಟ್ಟಕ್ಕೆ ಭಕ್ತರು ತಂದು ಬಿಡುವ ರಾಸುಗಳನ್ನು ರಾತ್ರೋ ರಾತ್ರಿ ಕದ್ದು ತಮಿಳುನಾಡಿನ ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾತ ಈ ಇಮ್ಮಡಿ ಮಹದೇವಸ್ವಾಮಿ. ಈ ಬಗ್ಗೆ ಪ್ರಶ್ನಿಸಿದರೆ ಧಮಕಿ ಹಾಕುತ್ತಿದ್ದ. ಮಾದೇಶ್ವರ, ಮಾರಮ್ಮನ ಹೆಸರಿನಲ್ಲಿ ಈತ ಆಡಿದ್ದೇ ಆಟವಾಗಿತ್ತು ಎಂದು ರಾಜೇಂದ್ರ ಕಿಡಿಕಾರಿದರು.

ವಿಷ ಪ್ರಸಾದ ಸೇವಿಸಿ ನಮ್ಮ ಅಪ್ಪ-ಅಮ್ಮ ತೀರಿಕೊಂಡಿದ್ದಾರೆ, ಅನೇಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅಪರಾಧಿಗಳನ್ನು ಹೀಗೇ ಬಿಟ್ಟರೆ ನಾವು ಬದುಕಿದ್ದರೂ ಸತ್ತಂತೆ. ನಮ್ಮ ತಂದೆ ತೀರಿಕೊಂಡಿದ್ದಾರೆ, ಅವರೂ ಸಾಯಬೇಕು. ಅವರ ಮಕ್ಕಳೂ ತಬ್ಬಲಿಯಾಗಬೇಕು.

- ರಾಣಿಬಾಯಿ, ಮೃತ ಕೃಷ್ಣನಾಯಕ್‌, ಮೈಲಿಬಾಯಿ ಹಿರಿಯ ಪುತ್ರಿ

click me!