ಸಾಲಮನ್ನಾ : ಸಿಎಂ ಕುಮಾರಸ್ವಾಮಿಯಿಂದ ಮತ್ತೊಂದು ಗುಡ್ ನ್ಯೂಸ್

By Web DeskFirst Published Dec 21, 2018, 7:38 AM IST
Highlights

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ 17 ಲಕ್ಷ ರೈತರ ಸಾಲಮನ್ನಾ ಮಾಡಲು ಮುಂದಾಗಿದೆ. 10 ದಿನಗಳಲ್ಲಿ 50 ಸಾವಿರ ರು.ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ. 

ಸುವರ್ಣ ವಿಧಾನಸೌಧ :  ‘ರಾಜ್ಯ ಸರ್ಕಾರದ ಭರವಸೆಯಂತೆ 17 ಲಕ್ಷ ರೈತರ ತಲಾ 50 ಸಾವಿರ ರು. ಕೃಷಿ ಸಾಲದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹತ್ತು ದಿನಗಳ ಒಳಗಾಗಿ ಪಾವತಿಸಲಾಗುವುದು. ಜತೆಗೆ ಅಷ್ಟೂಮಂದಿಗೆ ಸರ್ಕಾರದ ವತಿಯಿಂದಲೇ ಋುಣಮುಕ್ತ ಪ್ರಮಾಣಪತ್ರ ವಿತರಿಸಲಾಗುವುದು. ಉಳಿದ 1.5 ಲಕ್ಷ ರು. ಬಾಕಿ ಹಣವನ್ನು ಮುಂದಿನ ಬಜೆಟ್‌ನಲ್ಲಿ ಎರಡು ಕಂತುಗಳಲ್ಲಿ ಬ್ಯಾಂಕ್‌ಗಳಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಸಂಜೆ ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಒಟ್ಟು 21 ಲಕ್ಷ ಮಂದಿಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾಗೆ ಸಿದ್ಧತೆ ನಡೆಸಿದ್ದೇವೆ. 

ಇದರಲ್ಲಿ 17 ಲಕ್ಷ ಖಾತೆಗಳು ಚಾಲ್ತಿ ಖಾತೆ ಹಾಗೂ 2.82 ಲಕ್ಷ ಎನ್‌ಪಿಎ ಖಾತೆಗಳು ಇವೆ. ಬಜೆಟ್‌ನಲ್ಲಿ ಈಗಾಗಲೇ 6,500 ಕೋಟಿ ರು. ಮೀಸಲಿಟ್ಟಿದ್ದು, ಈ ಹಣ ಬಳಕೆ ಮಾಡಿಕೊಂಡು 17 ಲಕ್ಷ ಖಾತೆಗಳಿಗೆ ಮೊದಲ ಹಂತವಾಗಿ ತಲಾ 50 ಸಾವಿರ ರು. ಸಾಲ ಪಾವತಿ ಮಾಡಲಾಗುವುದು. ಜತೆಗೆ ಸರ್ಕಾರದ ವತಿಯಿಂದಲೇ ಋುಣಮುಕ್ತ ಪ್ರಮಾಣಪತ್ರ ನೀಡಲಾಗುವುದು’ ಎಂದು ಘೋಷಿಸಿದರು.

‘ಸಹಕಾರಿ ಬ್ಯಾಂಕ್‌ಗಳ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾದಿಂದ 44 ಲಕ್ಷ ರೈತ ಕುಟುಂಬಗಳಿಗೆ ಅನುಕೂಲ ಆಗಲಿದೆ. ಈವರೆಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಯಾರೊಬ್ಬರಿಗೂ ಸಾಲ ವಸೂಲಾತಿ ನೋಟಿಸ್‌ ನೀಡಿಲ್ಲ. ಬದಲಿಗೆ ಬಾಕಿ ಉಳಿಸಿಕೊಂಡಿರುವ ಸಾಲ ತೀರಿಸಲು ರಿಯಾಯಿತಿ ಕೊಡುಗೆಗಳನ್ನು ತಿಳಿಸಲು ಪತ್ರಗಳನ್ನು ಬರೆದಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

‘ಅಧಿಕಾರಕ್ಕೆ ಬಂದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ನಾಲ್ಕು ಕಂತುಗಳಲ್ಲಿ ಪಾವತಿ ಮಾಡುವುದಾಗಿ ಘೋಷಣೆ ಮಾಡಿದ್ದೆವು. ಮುಂದಿನ ಬಜೆಟ್‌ನಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಬಿಜೆಪಿಯವರು ಸಾಲ ಮನ್ನಾ ವಿಚಾರವನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಯಾರೊಬ್ಬರೂ ಸಾಲ ಮನ್ನಾ ಆದೇಶ ಮಾಡಿದ ಬಳಿಕ ಗಂಟೆಗಳ ಲೆಕ್ಕದಲ್ಲಿ ಹಣ ಹೊಂದಿಸಲು ಸಾಧ್ಯವಿಲ್ಲ. ಜಗದೀಶ್‌ ಶೆಟ್ಟರ್‌ ಅವರು 3,800 ಕೋಟಿ ರು .ಸಾಲ ಮನ್ನಾ ಮಾಡಿ 800 ಕೋಟಿ ರು. ಹಣ ನೀಡಿದ್ದರು. ಬಾಕಿ ಹಣವನ್ನು ಸಿದ್ದರಾಮಯ್ಯ ಅವರ ಸರ್ಕಾರ ತೀರಿಸಿತ್ತು. ಸಿದ್ದರಾಮಯ್ಯ ಅವರು ಮನ್ನಾ ಮಾಡಿದ ಸಾಲದಲ್ಲಿ 4000 ಕೋಟಿ ರು. ನಾವು ತೀರಿಸಿದ್ದೇವೆ’ ಎಂದರು.

ಕೇಂದ್ರ ಸರ್ಕಾರ ಮಾಹಿತಿ ಪಡೆದಿದೆ:

ರಾಜ್ಯ ಸರ್ಕಾರ 46 ಸಾವಿರ ಕೋಟಿ ರು. ಸಾಲವನ್ನು ಹೇಗೆ ಮನ್ನಾ ಮಾಡುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರವೂ ಮಾಹಿತಿ ಕಲೆ ಹಾಕಿದೆ. ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯು ರಾಜ್ಯದಿಂದ ಮಾಹಿತಿ ಪಡೆದಿದೆ. ಅಷ್ಟೇ ಅಲ್ಲದೆ ಗುಜರಾತ್‌ ಸರ್ಕಾರದ ಹಣಕಾಸು ಇಲಾಖೆ ಕೂಡ ಮಾಹಿತಿ ಪಡೆದಿದೆ. ಇಷ್ಟುಶಿಸ್ತು ಬದ್ಧವಾಗಿ ಸಾಲ ಮನ್ನಾ ಮಾಡುತ್ತಿರುವುದಕ್ಕೆ ಅವರಿಗೆ ಅಚ್ಚರಿಯಾಗಿದೆ ಎಂದು ಹೇಳಿದರು.

ಸರ್ಕಾರವು ಕೇವಲ ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌, ಬಾಂಡ್‌ ಪಡೆದು ಸಾಲ ಮನ್ನಾ ಮಾಡುತ್ತಿದೆ. ಕೆಲವರು ರೈತರ ಹೆಸರಿನಲ್ಲಿ ಶ್ರೀಮಂತರು ಸಾಲಮನ್ನಾ ಆಗುವುದನ್ನು ತಪ್ಪಿಸಲಾಗುವುದು. ನಮ್ಮ ಶಿಸ್ತುಬದ್ಧ ಕಾರ್ಯಕ್ರಮ ನೋಡಿಯೇ ಬಿಜೆಪಿಯವರಿಗೆ ಹೊಟ್ಟೆನೋವು ಶುರುವಾಗಿದೆ ಎಂದರು.

ಸಾಲ ಕೊಡಿಸುತ್ತೇನೆ ಎಂದು ಹೇಳಿಲ್ಲ: ಸಿಎಂ ಎಚ್‌ಡಿಕೆ

‘ರೈತರ ಸಾಲದಲ್ಲಿ ಕೇವಲ 50 ಸಾವಿರ ರು. ಸಾಲ ಪಾವತಿ ಮಾಡಿದರೆ ಉಳಿದ ಮೊತ್ತವನ್ನು ತೀರಿಸುವವರೆಗೂ ಹೊಸದಾಗಿ ಸಾಲ ನೀಡುವುದಿಲ್ಲ. ಹೀಗಾಗಿ ರೈತರು ಸಮಸ್ಯೆ ಎದುರಿಸುತ್ತಾರೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅವರ ಸಾಲ ಮರು ಪಾವತಿ ಮಾಡಲು ಸಹಕಾರ ನೀಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದೇನೆ. ಇದರಂತೆ ಅವರ ಸಾಲ ಮರು ಪಾವತಿಗೆ ಪ್ರಯತ್ನ ಮಾಡುತ್ತಿದ್ದೇನೆ. ಹೊಸದಾಗಿ ಸಾಲ ಕೊಡಿಸುತ್ತೇನೆ ಎಂದು ಹೇಳಿರಲಿಲ್ಲ. ನನ್ನ ಆದ್ಯತೆ ರೈತರು ಇನ್ನು ಮುಂದೆ ಸಾಲ ಮಾಡದಂತೆ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವಂತೆ ಮಾಡುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

click me!