ನಿವೃತ್ತಿ ವಯಸ್ಸು ಇಳಿಸಲು ಕೇಂದ್ರ ಸರ್ಕಾರ ಚಿಂತನೆ

By Web DeskFirst Published Sep 25, 2019, 7:59 AM IST
Highlights

33 ವರ್ಷ ಸೇವೆ ಸಲ್ಲಿಸಿದವರ ನಿವೃತ್ತಿ? | ನಿವೃತ್ತಿ ವಯಸ್ಸು ಇಳಿಸಲು ಕೇಂದ್ರ ಸರ್ಕಾರ ಚಿಂತನೆ |  ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೊಸ ಐಡಿಯಾ |  ಬೇಗ ಕೆಲಸಕ್ಕೆ ಸೇರಿದವರು ಬೇಗ ನಿವೃತ್ತಿ ಸಂಭವ

ನವದೆಹಲಿ (ಸೆ. 25): ಕೇಂದ್ರ ಸರ್ಕಾರಿ ನೌಕರಿಯಲ್ಲಿರುವವರ ನಿವೃತ್ತಿ ವಯಸ್ಸನ್ನು ಇಳಿಕೆ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಹಾಲಿ 60. ಇದನ್ನು ಇಳಿಕೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ 33 ವರ್ಷ ಸೇವೆಯನ್ನು ಪೂರ್ಣಗೊಳಿಸಿದವರು ಅಥವಾ 60 ವರ್ಷ ತುಂಬಿದವರನ್ನು ನಿವೃತ್ತಿಗೊಳಿಸುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವ ನೀಡಿದೆ. ಅದನ್ನು ವೆಚ್ಚ ಇಲಾಖೆ ಪರಿಶೀಲನೆ ನಡೆಸುತ್ತಿದ್ದು, ಹಣಕಾಸು ಹೊರೆ ಕುರಿತು ಲೆಕ್ಕಾಚಾರ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅನರ್ಹ ಶಾಸಕರಿಗೆ ಈಗ ಹೊಸ ಆತಂಕ..!

ಹೊಸ ಪ್ರಸ್ತಾವ ಜಾರಿಗೆ ಬಂದರೆ, 27ನೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದವರಿಗೆ ಭರ್ತಿ 33 ವರ್ಷಗಳ ಕಾಲ ಸರ್ಕಾರಿ ಉದ್ಯೋಗ ಸಿಗುತ್ತದೆ. ಅದಕ್ಕೂ ಮುನ್ನವೇ ಹುದ್ದೆ ಪಡೆದವರು ಬೇಗ ನಿವೃತ್ತಿಯಾಗಿಬಿಡುತ್ತಾರೆ. ಉದಾಹರಣೆಗೆ 23ನೇ ವಯಸ್ಸಿನಲ್ಲಿ ಕೇಂದ್ರ ಸರ್ಕಾರಿ ನೌಕರಿ ಪಡೆದವರು 56ನೇ ವಯಸ್ಸಿನಲ್ಲೇ ನಿವೃತ್ತರಾಗಿಬಿಡುತ್ತಾರೆ.

ನಿರುದ್ಯೋಗ ಸಮಸ್ಯೆ ನಿವಾರಣೆ:

ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಇದೆಯಾದರೂ, ಎಲ್ಲ ಕೇಂದ್ರೀಯ ವಿದ್ಯಾಲಯಗಳಲ್ಲಿರುವ ಪ್ರಾಧ್ಯಾಪಕರು ಹಾಗೂ ಕೇಂದ್ರ ಸರ್ಕಾರಿ ವೈದ್ಯರ ನಿವೃತ್ತಿ ವಯಸ್ಸು 65 ಇದೆ. ಹೊಸ ಪ್ರಸ್ತಾವ ಜಾರಿಗೆ ಬಂದರೆ ಒಂದು ಮಟ್ಟಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೆ ಬಡ್ತಿ ಎದುರು ನೋಡುತ್ತಿರುವ ಅಧಿಕಾರಿಗಳಿಗೆ ಹಾದಿ ಸುಗಮವಾಗಲಿದೆ. ಜತೆಗೆ ದೀರ್ಘಾವಧಿಯಲ್ಲಿ ಸರ್ಕಾರಿ ವೆಚ್ಚವನ್ನು ತಗ್ಗಿಸಲಿದೆ.

ನೆರೆ ಸಂತ್ರಸ್ತರಿಗೆ ನೆರವಾಗದಿದ್ದರೆ ಉಗ್ರ ಹೋರಾಟ: ಕೈ ಎಚ್ಚರಿಕೆ

ಈ ನಡುವೆ, ಎಲ್ಲ ಹುದ್ದೆಗಳನ್ನು ಕೇಡರ್‌ ಹಾಗೂ ಗ್ರೇಡ್‌ವಾರು ಪಟ್ಟಿಮಾಡಬೇಕು. ಮಂಜೂರಾದ ಹುದ್ದೆಗಳು, ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಸೆ.30ರೊಳಗೆ ನೀಡಬೇಕು. ಈ ವಿವರದಲ್ಲಿ ನೌಕರರ ಶೈಕ್ಷಣಿಕ ಅರ್ಹತೆ ಹಾಗೂ ಅವರು ಪಡೆದಿರುವ ತರಬೇತಿಯ ಮಾಹಿತಿಯೂ ಇರಬೇಕು ಎಂದು ಸರ್ಕಾರ ಸೂಚಿಸಿದೆ.

2018ರ ಮಾ.1ಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದಲ್ಲಿ 38 ಲಕ್ಷ ಮಂಜೂರಾದ ಹುದ್ದೆಗಳು ಇದ್ದವು. ಆ ಪೈಕಿ 31.18 ಲಕ್ಷ ಹುದ್ದೆಗಳು ಭರ್ತಿಯಾಗಿವೆ. ಆದರೆ ಉಳಿದ ಹುದ್ದೆಗಳು ಖಾಲಿ ಇವೆ.

ಭಾರತೀಯರ ಜೀವಿತಾವಧಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡಬೇಕು ಎಂದು ಆರ್ಥಿಕ ಸಮೀಕ್ಷೆಯಲ್ಲಿ ನೀತಿ ಆಯೋಗ ಶಿಫಾರಸು ಮಾಡಿದೆ. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58 ಇತ್ತು. ಅದನ್ನು 1998ರಲ್ಲಿ 60ಕ್ಕೆ ಏರಿಸಲಾಗಿತ್ತು. ಹಲವು ರಾಜ್ಯಗಳಲ್ಲಿ ನೌಕರರ ನಿವೃತ್ತಿ ವಯಸ್ಸು 60ರಿಂದ 62ರವರೆಗೆ ಇದೆ.

click me!