ಗಣ್ಯರ ಮಕ್ಕಳಿಗೆ ನಲಪಾಡ್ ಆವಾಜ್

First Published May 22, 2018, 7:35 AM IST
Highlights

 ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸುವಾಗ  ಅಂಬರೀಶ್ ಪುತ್ರ, ಪಿ.ಸಿ.ಮೋಹನ್ ಪುತ್ರ ಸೇರಿ ಹಲವು ರಾಜಕಾರಣಿಗಳ ಪುತ್ರ ಇದ್ದರು. ಇವರ ಯಾರ ಮಾತು ಕೇಳದ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಮನಸೋ ಇಚ್ಛೆ ವಿದ್ವತ್ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಎಲ್ಲರೂ ಮೂಕ ಪ್ರೇಕ್ಷಕರಂತೆ ನಿಂತಿದ್ದರು’ ಎಂದು ಸಿಸಿಬಿ ಪೊಲೀಸರು  ಚಾರ್ಜ್‌ಶೀಟ್‌ನಲ್ಲಿ ವಿವರಿಸಿದ್ದಾರೆ.

ಬೆಂಗಳೂರು : ‘ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸುವಾಗ ಮಾಜಿ ಸಚಿವ ಅಂಬರೀಶ್ ಪುತ್ರ, ಸಂಸದ ಪಿ.ಸಿ.ಮೋಹನ್ ಪುತ್ರ ಸೇರಿ ಹಲವು ರಾಜಕಾರಣಿಗಳ ಪುತ್ರ ಇದ್ದರು. ಇವರ ಯಾರ ಮಾತು ಕೇಳದ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಮನಸೋ ಇಚ್ಛೆ ವಿದ್ವತ್ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಎಲ್ಲರೂ ಮೂಕ ಪ್ರೇಕ್ಷಕರಂತೆ ನಿಂತಿದ್ದರು’ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ವಿವರಿಸಿದ್ದಾರೆ.

ಫೆ.17ರಂದು ನಡೆದ ಘಟನೆ ವೇಳೆ ಫರ್ಜಿ ಕೆಫೆಯಲ್ಲಿ ಮಾಜಿ ಸಚಿವ ಅಂಬರೀಶ್ ಪುತ್ರ ಅಭಿಷೇಕ್, ಬಿಜೆಪಿ ಸಂಸದ ಪಿ.ಸಿ. ಮೋಹನ್ ಪುತ್ರ ಪಿ.ಎಂ.ರಿತಿನ್, ಶಾಸಕ ಮುರುಗೇಶ್ ನಿರಾಣಿ ಪುತ್ರ ವಿಶಾಲ್ ನಿರಾಣಿ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್, ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಪಾಲಿಕೆ ಸದಸ್ಯ ಯುವರಾಜ್ ಫರ್ಜಿ ಕೆಫೆಯಲ್ಲಿದ್ದರು. ಆದರೆ, ಅಸಹಾಯಕರಾಗಿದ್ದ ಇವರೆಲ್ಲ ಸ್ಥಳದಿಂದ ಹೊರಟು ಹೋಗಿದ್ದರು. 

‘ನಲಪಾಡ್ ಹಾಗೂ ನಾನು ಬಾಲ್ಯದ ಸ್ನೇಹಿತರು. ನಲಪಾಡ್ ಶಾಂಪೇನ್ ಬಾಟಲಿ ಹಿಡಿದು ನನ್ನ ಮುಖದ ಮೇಲೆ ಚಿಮ್ಮಿಸಲು ಬೆನ್ನಟ್ಟಿದ್ದ. ಈ ವೇಳೆ ಅಲ್ಲಿಯೇ ಕಾಲು ಚಾಚಿಕೊಂಡು ಊಟ ಮಾಡುತ್ತಿದ್ದ ವಿದ್ವತ್ ಅವರ ಕಾಲು ನಲಪಾಡ್‌ಗೆ ತಾಗಿತು ಎಂದು ರಿತಿನ್ ಹೇಳಿದ್ದಾರೆ. ಕಾಲು ತಾಗಿದಾಗ ವಿದ್ವತ್, ನೋಡಿಕೊಂಡು ಓಡಾಡಿ ಎಂದು ನಲಪಾಡ್‌ಗೆ ಹೇಳಿದರು. ಇಷ್ಟಕ್ಕೆ ಕುಪಿತಗೊಂಡ ನಲಪಾಡ್ ನಾನು ಯಾರು ಗೊತ್ತಾ ಎಂಎಲ್‌ಎ ಪುತ್ರ. ನನಗೆ ಎದುರು ಮಾತನಾಡುತ್ತೀಯಾ? ನನ್ನ ಬೂಟು ನೆಕ್ಕಿ, ಕ್ಷಮೆ ಕೇಳು ಎಂದು ಹೇಳಿದ. ಇದಕ್ಕೆ ವಿದ್ವತ್ ನಿರಾಕರಿಸಿದಾಗ ನಲಪಾಡ್ ಹಲ್ಲೆ ನಡೆಸಿದ. 

ನಂತರ ನಲಪಾಡ್ ಸಹಚರರು ವಿದ್ವತ್ ನನ್ನು ಥಳಿಸಲು ಮುಂದಾದರು. ನಾನು ಮತ್ತು ಅಂಬರೀಶ್ ಅವರ ಪುತ್ರ ಅಭಿಷೇಕ್ ಇಬ್ಬರು ಮಧ್ಯ ಪ್ರವೇಶಿಸಿ, ಹಲ್ಲೆ ನಡೆಸು ವುದನ್ನು ನಿಲ್ಲಿಸುವಂತೆ ನಲಪಾಡ್‌ನ ಕೇಳಿ  ಕೊಂಡೆವು. ಎಷ್ಟೇ ಹೇಳಿದರೂ ನಲಪಾಡ್ ನಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ’ ಎಂದು ರಿತಿನ್ ಹೇಳಿಕೆ ನೀಡಿದ್ದಾರೆ. ನಿನಗೂ ಇದಕ್ಕೂ ಸಂಬಂಧವಿಲ್ಲ: ‘ನಾನು ವಿದ್ವತ್ ರಕ್ಷಣೆಗೆ ಮುಂದಾದಾಗ ನಲಪಾಡ್ ಇದು ನಿನಗೆ ಸಂಬಂಧಪಡದ ವಿಚಾರ ಮಧ್ಯ ಪ್ರವೇಶಿಸಬೇಡ ಎಂದರು’ ಎಂದು ಅಭಿಷೇಕ್ ಹೇಳಿಕೆ ಕೊಟ್ಟಿದ್ದಾರೆ.

ನಿಮ್ಮ ಚಿಕ್ಕಪ್ಪನಿಗೆ ಕೇಳು : ರಾಜ್ ಮೊಮ್ಮಗನಿಗೆ ಧಮ್ಕಿ

‘ನಿಮ್ಮ ಚಿಕ್ಕಪ್ಪನಿಗೆ ಕೇಳು ನಾನ್ಯಾರು ಅಂತಾ. ನಾನು ನಲಪಾಡ್. ಎಂಎಲ್‌ಎ ಮಗ..!’ ಹೀಗೆ ತನ್ನ ಗೆಳೆಯನ ರಕ್ಷಣೆಗೆ ಧಾವಿಸಿ ಡಾ.ರಾಜ್‌ಕುಮಾರ್ ಮೊಮ್ಮಗ ಗುರುರಾಜ್ ಕುಮಾರ್‌ಗೆ ನಲಪಾಡ್ ಧಮ್ಕಿ ಹಾಕಿರುವ ಅಂಶವು ಉಲ್ಲೇಖವಾಗಿದೆ. ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಭೇಟಿಗೆ ಬಂದಾಗ ಗುರುರಾಜ್ ಅವರು ನಲಪಾಡ್ ಗ್ಯಾಂಗ್‌ಗೆ ಮುಖಾಮುಖಿಯಾಗಿದ್ದಾರೆ. ಆ ವೇಳೆ ರೋಷದಲ್ಲಿದ್ದ ನಲಪಾಡ್ ತಂಡವು, ಆಸ್ಪತ್ರೆಯಲ್ಲೂ ಗೂಂಡಾಗಿರಿ ಮುಂದುವರೆಸಿದ್ದಾರೆ. ಈ ವೇಳೆ ವಿದ್ವತ್ ರಕ್ಷಣೆಗೆ ಧಾವಿಸಿದ ಗುರುರಾಜ್‌ ರೊಂದಿಗೆ ಆರೋಪಿಗಳು ಜಟಾಪಟಿ ನಡೆಸಿದ್ದಾರೆ. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕೆಲವರು, ಅವರನ್ನು ಮುಟ್ಟಬೇಡ. ದೊಡ್ಡವರ ಮನೆಯವರು. ರಾಜ್‌ಕುಮಾರ್ ಪ್ಯಾಮಿಲಿ ಎಂದು ಹೇಳಿ ತಡೆದಿದ್ದಾರೆ. ಆಗ ನಲಪಾಡ್, ‘ನಾನ್ಯಾರು ಅಂತಾ ನಿನಗೆ ಗೊತ್ತಿಲ್ವಾ? ನಿಮ್ಮ ಚಿಕ್ಕಪ್ಪ ಪುನೀತ್ ನನಗೆ ಪರಿಚಿತರು. ಹೋಗಿ ಕೇಳು ಅವರನ್ನು ನಾನ್ಯಾರು ಅಂತಾ ಹೇಳುತ್ತಾರೆ’ ಎಂದಿದ್ದ. 

"

click me!