
ಬೆಂಗಳೂರು: ಮುಖ್ಯಮಂತ್ರಿಯಾಗಿ ಇನ್ನೂ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿಲ್ಲ. ಆಗಲೇ ಸಂಪುಟ ಸಂಕಟ ಆರಂಭವಾಗಿದೆ. ಡಿಸಿಎಂ ಪಟ್ಟಕ್ಕೇರಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಆರಂಭವಾಗಿದ್ದರೆ, ಮಂತ್ರಿ ಪದವಿ ಗಿಟ್ಟಿಸಲು ಎಲ್ಲ ಶಾಸಕರೂ ತಾ ಮುಂದು, ನಾ ಮುಂದು ಎಂದು ಸಾಲಿನಲ್ಲಿ ನಿಂತಿದ್ದಾರೆ.
ಶುರುವಾಗಿದೆ ಸಂಪುಟ ಸಂಕಟ..!
ಜಾತಿ ಸಮೀಕರಣ ಆಧರಿಸಿ ಮಂತ್ರಿಗಿರಿ ಹಂಚಲು ಉಭಯ ಪಕ್ಷಗಳು ನಿರ್ಧಿರಿಸಿವೆ. ಕಾಂಗ್ರೆಸ್ಗೆ 18 ಹಾಗೂ ಜೆಡಿಎಸ್ಗೆ 12 ಸಚಿವ ಸ್ಥಾನಗಳನ್ನು ಹಂಚಬೇಕೆಂದು ಪಕ್ಷಗಳು ಒಪ್ಪಿವೆ. ಸಚಿವರಾಗೋಕೆ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲೇ ಭಾರೀ ಪೈಪೋಟಿ ನಡೆಯುತ್ತಿದ್ದು, ಖಾತೆ ಹಂಚಿಕೆಯೇ ಕುಮಾರಸ್ವಾಮಿ ಪಾಲಿಗೆ ಮೈತ್ರಿ ಸರ್ಕಾರದ ಮೊದಲ ಅಗ್ನಿ ಪರೀಕ್ಷೆಯಾಗಲಿದೆ.
ಕಾಂಗ್ರೆಸ್‌ನಲ್ಲಿ ಶುರುವಾಯ್ತು ಡಿಸಿಎಂ ರೇಸ್..!
ಮೈತ್ರಿ ಸರ್ಕಾರದಲ್ಲಿ ಎಚ್ಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಹುದ್ದೆ, ಕಾಂಗ್ರೆಸ್ಗೆ ಉಪಮುಖ್ಯಮಂತ್ರಿ ಹುದ್ದೆ ಎನ್ನುವ ಒಪ್ಪಂದವಾಗಿದೆ. ಕಾಂಗ್ರೆಸ್‌ನಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೆ ನಾಲ್ವರು ಆಕಾಂಕ್ಷಿಗಳಿದ್ದಾರೆ. ಜಿ.ಪರಮೇಶ್ವರ್ ಅವರಿಗೆ ದಲಿತ ಕೋಟಾದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಅಂತ ಹೇಳಿತ್ತಾದರೂ, ಈಗ ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್ ಮತ್ತು ಎಸ್. ಆರ್. ಪಾಟೀಲ್ ಕೂಡ ರೇಸ್ನಲ್ಲಿದ್ದಾರೆ.
ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅಪ್ಪಣೆ ಬೇಕಾ?
ಎಚ್.ಡಿ. ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ನ ಅಪ್ಪಣೆ ಬೇಕಾ ಎಂಬ ಚರ್ಚೆಗಳೂ ನಡೆಯುತ್ತಿವೆ. 'ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಿರಿಯ ನಾಯಕರನ್ನು ಭೇಟಿ ಮಾಡೋಕೆ ದೆಹಲಿಗೆ ಹೋಗುತ್ತಿದ್ದೇನೆ. ಈ ವೇಳೆ ಸೋನಿಯಾ-ರಾಹುಲ್ ಜೊತೆ ಮಾತನಾಡಿ ಸಂಪುಟ ವಿಸ್ತರಣೆ ಫೈನಲ್ ಮಾಡ್ತೀವಿ,' ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ, ಸಂಪುಟ ವಿಸ್ತರಣೆ ಬಗ್ಗೆ ಇಲ್ಲಿನ ಮುಖಂಡರೇ ನಿರ್ಧರಿಸುತ್ತೇವೆಂದು ಡಿ. ಕೆ ಶಿವಕುಮಾರ್ ಹೇಳಿದ್ದು ಸಂಪುಟ ಸಂಕಟ ಕಡಿಮೆಯಾಗುವಂತೆ ಎನಿಸುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.