
ಬೆಂಗಳೂರು: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಇನ್ನು ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳಾಗಲಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಉತ್ತರ ಕರ್ನಾಟಕ ಭಾಗದ ಎರಡು ಸಂಸ್ಥೆ ಗಳೂ ಸೇರಿದಂತೆ ನಾಲ್ಕು ಸಂಸ್ಥೆಗಳು ಒಂದೇ ಆಡಳಿತ ವ್ಯಾಪ್ತಿಯಲ್ಲಿವೆ. ಅವುಗಳು ಇನ್ನು ಮುಂದೆ ತಮ್ಮದೇ ಆಡಳಿತ ಮತ್ತು ಹಣಕಾಸು ಹಂಚಿಕೆ, ನೇಮಕ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳಾಗಲಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಭೂಸ್ವಾಧೀನ ಸರಳ: ರಾಜ್ಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಬಡಾವಣೆ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ಕಷ್ಟವಾಗಿತ್ತು. ಅದನ್ನು ಸರಿಪಡಿಸಿ ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಪ್ರಕಾರ ರಾಜ್ಯದ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ನಿರ್ಧರಿಸಿದೆ. ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ಈತನಕ ಹಿಂದಿನ ಕೆಐಎಡಿಬಿ ಕಾಯ್ದೆ ಪ್ರಕಾರವೇ ಭೂ ಸ್ವಾಧೀನ ಮಾಡುತ್ತಿದ್ದು, ಪರಿಹಾರ ಹಂಚಿಕೆ ಬಗ್ಗೆ ಅಸಮಾಧಾನಗಳು ಬರುತ್ತಿವೆ. ಆದ್ದರಿಂದ ಕೇಂದ್ರದ ಕಾಯ್ದೆ ಪ್ರಕಾರ ತಿದ್ದುಪಡಿ ಮಾಡಿ ಹೊಸ ನಿಯಮ ರೂಪಿಸಲಾಗುವುದು ಎಂದು ವಿವರಿಸಿದರು.
ಪ್ರಶಸ್ತಿಗೆ ಆಯ್ಕೆಗೆ ಸಮಿತಿ: ಗಣ ರಾಜ್ಯೋತ್ಸವ ವೇಳೆ ನೀಡಲಾಗುವ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಕನ್ನಡ ಮತ್ತು ಮುತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳು ಇರುತ್ತಾರೆ ಎಂದು ಜಯಚಂದ್ರ ಹೇಳಿದರು. ಉಡುಪಿ ಜಿಲ್ಲೆಯ ಬೆಳಪುವಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅತ್ಯಾಧುನಿಕ ಸಂಶೋಧನಾ ಕೇಂದ್ರವನ್ನು ರೂ.126ಕೋಟಿ ವೆಚ್ಚದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಇದಕಾಗಿ ಈಗಾಗಲೇ 125 ಎಕರೆ ಜಾಗ ದೊರೆತಿದ್ದು, ಆರಂಭಿಕ ರೂ.16ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಜಲಕಾಯ ಇನ್ನು ಸೂಕ್ಷ್ಮ ವಲಯ: ರಾಜ್ಯಾದ್ಯಂತ ವೆಟ್‌ಲ್ಯಾಂಡ್ (ಜಲಕಾಯ)ಗಳನ್ನು ಗುರುತಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗುತ್ತಿದ್ದು, ಸಮಿತಿಗಳಿಗೆ ಒಂದು ತಿಂಗಳ ಗಡುವು ವಿಧಿಸಲಾಗುತ್ತಿದೆ. ರಾಜ್ಯದಲ್ಲಿ ವೆಟ್‌ಲ್ಯಾಂಡ್‌ಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಿಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ 2010ರ ವೆಟ್‌ಲ್ಯಾಂಡ್ (ಜಲಕಾಯ) ನಿಯಮಗಳ ಪ್ರಕಾರ ರಾಜ್ಯದಲ್ಲಿ ವೆಟ್‌ಲ್ಯಾಂಡ್‌ಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.