ಬೆಳಗಾವಿಗೆ ಗೋವು ಸಾಗಣೆಯ ಗೋಳಿನ ಕತೆ

By Suvarna Web DeskFirst Published Jun 23, 2017, 12:05 PM IST
Highlights

ತಮಿಳುನಾಡಿನಿಂದ ಬೆಳಗಾವಿಯ ರೈತರು 36 ಹಸುಗಳನ್ನು ಸಾಗಿಸುತ್ತಿದ್ದರು
ಕಸಾಯಿ ಖಾನೆಗೆ ಸಾಗಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುಬ್ಬಿಯಲ್ಲಿ ಗೋವು ವಶ. ಗೋಶಾಲೆಗೆ ರವಾನೆ
3 ವಾರ ಬಳಿಕ ಬಿಡುಗಡೆ. ಬೆಳಗಾವಿಗೆ ಸಾಗಿಸುತ್ತಿದ್ದಾಗ ಚಿತ್ರದುರ್ಗದಲ್ಲಿ ಮತ್ತೆ ಸೆರೆ.

ತುಮಕೂರು/ ಚಿತ್ರದುರ್ಗ : ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮೂರು ವಾರಗಳಿಂದ ಗುಬ್ಬಿಯ ಧ್ಯಾನ್‌ ಫೌಂಡೇಶನ್‌ ಗೋಶಾಲೆಯಲ್ಲಿ ಬಂಧಿಯಾಗಿದ್ದ ಬೆಳಗಾವಿಯ ರೈತರಿಗೆ ಸೇರಿದ 36 ಹಸುಗಳಿಗೆ ಗುರುವಾರ ಬಿಡುಗಡೆ ಭಾಗ್ಯವೇನೋ ಸಿಕ್ಕಿತು. ಆದರೆ, ಲಾರಿಯಲ್ಲಿ ಬೆಳಗಾವಿ ಕಡೆ ಸಾಗುತ್ತಿದ್ದಾಗ ಹೈಕೋರ್ಟ್‌ನಿಂದ ತಡೆಯಾಜ್ಞೆ ಹೊರಬಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಮತ್ತೆ ಗುಬ್ಬಿಯ ಗೋಶಾಲೆಗೆ ತಂದು ಬಿಡಲಾಗಿದೆ.

ಮೂರು ವಾರಗಳ ಹಿಂದೆ ತಮಿಳುನಾಡಿನಲ್ಲಿ ಹೈನುಗಾರಿಕೆಗೆಂದು ಖರೀದಿಸಿದ್ದ ಹಸುಗಳನ್ನು ಬೆಳಗಾವಿ ರೈತರು ಲಾರಿಗಳಲ್ಲಿ ಸಾಗಿಸುತ್ತಿದ್ದರು. ಆದರೆ ಕ್ಯಾತಸಂದ್ರ ಬಳಿ ಸಂಘಟನೆಯೊಂದು ಈ ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಅಡ್ಡಿಪಡಿಸಿತ್ತು. ರೈತರು ರಸೀದಿ ತೋರಿಸಿದ ಬಳಿಕ ಸಂಘಟನೆಯವರು ಹೊರಟು ಹೋಗಿದ್ದರು. ಈ ವೇಳೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಈ ಹಸುಗಳನ್ನು ಗುಬ್ಬಿಯ ಧ್ಯಾನ್‌ ಫೌಂಡೇಶನ್‌ನ ಗೋಶಾಲೆಗೆ ಕಳುಹಿಸಿದ್ದರು.

ಪೊಲೀಸರ ಕ್ರಮದ ವಿರುದ್ಧ ಸಿಟ್ಟಾದ ರೈತರು ಕೋರ್ಟ್‌ ಮೊರೆ ಹೋದಾಗ ಪ್ರತಿ ಹಸುವಿಗೆ ರೂ.50 ಕೊಟ್ಟು ಹಸು ಬಿಡಿಸಿಕೊಂಡು ಹೋಗುವಂತೆ ಸೂಚಿಸಿತ್ತು. ಅದರಂತೆ ರೈತರು, ಪೊಲೀಸರೊಂದಿಗೆ ಗೋಶಾಲೆಗೆ ಹೋದಾಗ ಅಷ್ಟೊತ್ತಿಗಾಗಲೇ 27 ಹಸುಗಳು ಕರುಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ 3 ವಾರಗಳಿಂದ ಹಸು, ಕರುವಿನ ನಿರ್ವಹಣೆಗೆ ಮಾಡಿದ ರೂ.1.70 ಲಕ್ಷ ವೆಚ್ಚ ಪಾವತಿಸುವಂತೆ ಗೋಶಾಲೆಯವರು ತಾಕೀತು ಮಾಡಿದ್ದರು.

ಆದರೆ ಅಷ್ಟುಹಣ ಕೊಟ್ಟು ಹಸು ಬಿಡಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಫುಟ್‌ಪಾತ್‌ ಮೇಲೆಯೇ ಮಲಗಿ ರೈತರು ಹಸುವಿಗಾಗಿ ಕಾಯುತ್ತಾ ಕುಳಿತಿದ್ದರು. ಪ್ರತಿಭಟನೆ, ಧರಣಿ ನಡೆದರೂ, ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಅವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಲಿಲ್ಲ.

ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿರುವುದನ್ನು ಅರಿತ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಗುರುವಾರ ಬೆಳಗ್ಗೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಹಸುಗಳನ್ನು ಬಿಡಿಸಿಕೊಟ್ಟಿತು. ಕೊನೆಗೂ ಹಸು ಸಿಕ್ಕಿತಲ್ವಾ ಎನ್ನುವ ಖುಷಿಯಲ್ಲಿ ರೈತರು ಲಾರಿಯಲ್ಲಿ ಬೆಳಗಾವಿಗೆ ಸಾಗಿದರೆ ಚಿತ್ರದುರ್ಗದ ಭರಮಸಾಗರದಲ್ಲಿ ಹಸುಗಳನ್ನು ಮತ್ತೆ ವಶಕ್ಕೆ ತೆಗೆದುಕೊಂಡ ಪೊಲೀಸರು ಅದನ್ನು ವಾಪಸ್‌ ಕಳುಹಿಸಿಕೊಟ್ಟರು.

ಚಿತ್ರದುರ್ಗದಲ್ಲಿ ತಡೆದರು: ಗುಬ್ಬಿಯಿಂದ ಬೆಳಗಾವಿಯತ್ತ ಸಾಗುತ್ತಿದ್ದ ಹಸುಗಳಿದ್ದ ಲಾರಿಯನ್ನು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಠಾಣೆ ಪೊಲೀಸರು ಸಂಜೆ ವೇಳೆಗೆ ವಶಕ್ಕೆ ತೆಗೆದುಕೊಂಡು, ವಾಪಸ್‌ ಗುಬ್ಬಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಸಂಬಂಧ ‘ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ಎಸ್ಪಿ ಅರುಣರಂಗರಾಜನ್‌, ಧ್ಯಾನ್‌ ಫೌಂಡೇಷನ್‌ನವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಹಸುಗಳನ್ನು ಗೋಶಾಲೆಯಿಂದ ಒಯ್ಯಲು ತಡೆಯಾಜ್ಞೆ ನೀಡಲಾಗಿದೆ. ತಡೆಯಾಜ್ಞೆ ಆದೇಶ ತಮ್ಮ ಕೈಗೆ ತಲುಪಿದೆ. ಹಾಗಾಗಿ ಎಲ್ಲ ಹಸುಗಳನ್ನು ವಶಕ್ಕೆ ಪಡೆದು ಎಸ್ಕಾರ್ಟ್‌ ಮೂಲಕ ತುಮಕೂರಿನ ಗೋಶಾಲೆಗೆ ವಾಪಸ್‌ ಕಳುಹಿಸಿಕೊಡಲಾಗಿದೆ ಎಂದರು.

click me!