
ಬೆಂಗಳೂರು (ಡಿ.31): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಸರ್ಕಾರ ಲೂಟಿಗೆ ಇಳಿದಿದೆ. ಸ್ವಚ್ಛ ಭಾರತ್ ಅಭಿಯಾನದಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ₹108.50 ಕೋಟಿಯನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಈ ಸಂಬಂಧ ಸಿಬಿಐಗೂ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಶನಿವಾರ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಬಿಡುಗಡೆಯಾದ ₹108.50 ಕೋಟಿ ಯನ್ನು ಸಮುದಾಯ ಭವನಗಳ ನಿರ್ಮಾಣ, ವೈಯಕ್ತಿಕ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಬಳಸಬೇಕು. ಆದರೆ, ಈ ಹಣ ರಸ್ತೆ ನಿರ್ಮಾಣ, ಗೋಡೆಗಳಿಗೆ ಬಣ್ಣ ಹಚ್ಚಲು ಬಳಸುವ ಮೂಲಕ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ಲೋಕಾಯುಕ್ತ, ಎಸಿಬಿ ಹಾಗೂ ಸಿಬಿಐಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಯವರು ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದರು. ಬೆಂಗಳೂರಿನ ಸಿಡಿಪಿ(ಸಿಟಿ ಡೆವಲಪ್‌ಮೆಂಟ್ಪ್ಲ್ಯಾನ್) ನೋಟಿಫಿಕೇಷನ್ ಸಂದರ್ಭದಲ್ಲೂ ತಾರತಮ್ಯ ಎಸಗಲಾಗಿದೆ. ಈ ಮೂಲಕ, ಕೆಲ ಬಿಲ್ಡರ್ ಗಳಿಗೆ ಹಣ ಹೊಡೆಯಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಕೂಡಲೇ ಈ ನೋಟಿಫಿಕೇಷನ್ ರದ್ದುಪಡಿಸಬೇಕು ಎಂದರು.
ಮಲಪ್ರಭಾ, ಘಟಪ್ರಭ ನಾಲೆಗಳ ನವೀಕರಣಕ್ಕಾಗಿ 4 ತಿಂಗಳ ಹಿಂದೆ 600 ಕೋಟಿ ಟೆಂಡರ್ ಕರೆಯಲಾಗಿತ್ತು. ಇದೀಗ ಈ ಟೆಂಡರ್ ಮೊತ್ತವನ್ನು 1100 ಕೋಟಿಗೆ ಏರಿಸಲಾಗಿದೆ. ಇದರ ಗುತ್ತಿಗೆಯನ್ನು ಡಿ.ಯು. ಉಪ್ಪಾರ ಎಂಬುವರಿಗೆ ನೀಡಲಾಗಿದೆ. ಈ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಬೇಕು. ಬಿಬಿಎಂಪಿ ಕಾರ್ನರ್ ಸೈಟುಗಳನ್ನು ಅಡವಿಟ್ಟು ಸರ್ಕಾರ ₹ ಕೋಟಿ ಸಾಲ ಪಡೆದುಕೊಂಡಿದೆ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಎಂಎಲ್‌ಎ, ಎಂಎಲ್‌ಸಿಗಳ ಆಪ್ತ ಸಹಾಯಕರಿಗೆ ಸಂಬಳ ಕೊಟ್ಟಿಲ್ಲ. ಹಾಲು ಉತ್ಪಾದಕರಿಗೂ ಸಬ್ಸಿಡಿ ಹಣ ನೀಡಿಲ್ಲ ಎಂದು ಬಿಎಸ್‌ವೈ ಆರೋಪಿಸಿದರು. ಇದೇ ವೇಳೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಇಡೀ ದೇಶ ಕಾಂಗ್ರೆಸ್ ಮುಕ್ತವಾಗಲು ಸಾಧ್ಯವಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.