ಇಂದು ಸಂಜೆಯಿಂದಲೇ ನಂದಿಬೆಟ್ಟಕ್ಕೆ ಪ್ರವೇಶವಿಲ್ಲ

By Suvarna Web DeskFirst Published Dec 31, 2017, 8:58 AM IST
Highlights

ಡಿ.31ರ ಸಂಜೆ 4 ಗಂಟೆಯಿಂದಲೇ 2018ರ ಜನವರಿ 1ರ ಬೆಳಗ್ಗೆ 8 ಗಂಟೆಯವರೆಗೂ ನಂದಿ ಗಿರಿಧಾಮದ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಚಿಕ್ಕಬಳ್ಳಾಪುರ(ಡಿ.31): ವಿಶ್ವ ಪ್ರಸಿದ್ಧ ನಂದಿ ಗಿರಿಧಾಮದಲ್ಲಿ ನೂತನ ವರ್ಷಾಚರಣೆ ಸಂಭ್ರಮ ಆಸೆ ಹೊಂದಿದ್ದ ಪ್ರವಾಸಿಗರಿಗೆ ಪೊಲೀಸ್ ಇಲಾಖೆ ನಿರಾಸೆ ಮೂಡಿಸಿದೆ.

ಡಿ.31ರ ಸಂಜೆ 4 ಗಂಟೆಯಿಂದಲೇ 2018ರ ಜನವರಿ 1ರ ಬೆಳಗ್ಗೆ 8 ಗಂಟೆಯವರೆಗೂ ನಂದಿ ಗಿರಿಧಾಮದ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇನ್ನು ಸೆಲ್ಫಿ ತಾಣವಾಗಿ ಖ್ಯಾತಿ ಪಡೆದಿರುವ ಆವಲ ಬೆಟ್ಟಕ್ಕೆ ಇದೇ ಅವಧಿಯಲ್ಲಿ ಪ್ರವೇಶ ನಿಷೇಧಿಸಿ ಪೊಲೀಸ್ ಇಲಾಖೆ ಆದೇಶಿಸಿದೆ. ಅಲ್ಲದೆ ಕರ್ಕಶ ಸದ್ದು ಮಾಡುವ ಬೈಕ್‌ಗಳು ಓಡಿಸಿದಲ್ಲಿ ಪ್ರಕರಣ ದಾಖಲಿಸುವುದು, ಮಾಮೂಲಿ ದಿನಗಳ ಸಮಯಕ್ಕೆ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಇನ್ನು ಧ್ವನಿ ವರ್ಧಕಗಳನ್ನು ಬಳಸಿ ನೂತನ ವರ್ಷ ಸ್ವಾಗತಿಸಲು ಇಚ್ಚಿಸಿದ್ದವರಿಗೂ ನಿರಾಸೆ ಎದುರಾಗಿದೆ. ಈವರೆಗೆ ಜಿಲ್ಲೆಯಲ್ಲಿ ಯಾರೂ ಧ್ವನಿವರ್ಧಕ ಬಳಸಿ ಬಹಿರಂಗವಾಗಿ ಪಾರ್ಟಿಗಳನ್ನು ನಡೆಸಲು ಪೊಲೀಸರಿಂದ ಅನುಮತಿ ಪಡೆದಿಲ್ಲ. ಹಾಗಾಗಿ ಎಲ್ಲಿಯೂ ತಡರಾತ್ರಿ ಪಾರ್ಟಿಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿದೆ. ಆದರೆ, ನಂದಿ ಗಿರಿಧಾಮದ ಸುತ್ತಲೂ ನಿರ್ಮಾಣವಾಗಿರುವ ರೆಸಾರ್ಟ್‌'ಗಳು ಅತಿಥಿಗಳನ್ನು ಆಹ್ವಾನಿಸಲು ಸಜ್ಜಾಗಿದ್ದು, ಈಗಾಗಲೇ ಎಲ್ಲಾ ರೆಸಾರ್ಟ್‌'ಗಳೂ ಹೌಸ್‌'ಫುಲ್ ಆಗಿವೆ.

click me!