
ಬೆಂಗಳೂರು(ನ.30): ದೇಶ ಸೇವೆಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರು ಅವರು. ಹೆತ್ತವರು, ಹೆಂಡತಿ , ಮಗಳು ಇವರೆಲ್ಲರನ್ನು ಬಿಟ್ಟು ಕಾಶ್ಮೀರದಲ್ಲಿ ಕಾವಲಿಗೆ ನಿಂತಿದ್ದರು. ಇಂಥಾ ಮಹಾನ್ ಯೋಧ ಇಂದು ನಮ್ಮೊಂದಿಗಿಲ್ಲ. ನಿನ್ನೆ ಕಾಶ್ಮೀರದಲ್ಲಿ ಉಗ್ರರೊಂದಿಗೆ ಕಾದಾಡಿ ಹುತಾತ್ಮರಾದವರಲ್ಲಿ ನಮ್ಮ ಬೆಂಗಳೂರಿನ ಅಕ್ಷಯ್ ಗಿರೀಶ್ ಕುಮಾರ್ ಸಹ ಒಬ್ಬರು.
ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರದಾಳಿಯಲ್ಲಿ ನಿನ್ನೆ ಹುತಾತ್ಮರಾದ 7 ಯೋಧರ ಪೈಕಿ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಸಹ ಒಬ್ಬರು. 31 ವರ್ಷದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಬೆಂಗಳೂರಿನ ಯಲಹಂಕದ ಗೇಟ್ ಗಾರ್ಡನ್ ನಿವಾಸಿಯಾಗಿದ್ದು , ನಿನ್ನೆ ನಡೆದ ಉಗ್ರರ ಕಾಳಗದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ.
2003ರಲ್ಲಿ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುವಾಗಲೇ ದೇಶ ಸೇವೆ ಮಾಡಬೇಕೆಂಬ ಮಹಾದಾಸೆಯೊಂದಿಗೆ ಸೇನೆಗೆ ಸೇರಿದರು. ಪುಣೆಯಲ್ಲಿ ಭಾರತೀಯ ಸೇನೆಗೆ ಸೇರಿದ ಅಕ್ಷಯ್ ಗಿರೀಶ್ ಕುಮಾರ್ , ಮೊದಲಿಗೆ ಚಂಡೀಗಢ ನಂತರ ಕಾಶ್ಮೀರದಲ್ಲಿ ಸೇವೆಸಲ್ಲಿಸುತ್ತಿದ್ದರು. ನಿನ್ನೆ ಪಾಪಿ ಉಗ್ರರೊಂದಿಗೆ ಕಾದಾಡಿ ದೇಶಕ್ಕಾಗಿ ಪ್ರಾಬಿಟ್ಟಿದ್ದಾರೆ.
ಗಿರೀಶ್ ಕುಮಾರ್ ಮತ್ತು ಮೇಘನಾ ದಂಪತಿಯ ಪುತ್ರರಾದ ಅಕ್ಷಯ್ ಗಿರೀಶ್ ಕುಮಾರ್ಗೆ, ಅವಳಿ ಸಹೋದರಿಯರಿದ್ದಾರೆ. 5 ವರ್ಷಗಳ ಹಿಂದಷ್ಟೇ ಬಾಲ್ಯದ ಗೆಳತಿ ಸಂಗೀತರನ್ನು ವರಿಸಿದ್ದು, ಇವರಿಗೆ ಎರಡೂವರೆ ವರ್ಷದ ನೈನಾ ಎಂಬ ಹೆಣ್ಣು ಮಗು ಸಹ ಇದೆ.
ಅಕ್ಷಯ್ ತಂದೆ ಗಿರೀಶ್ ಜೆಟ್ ಏರ್ವೇಸ್'ನಲ್ಲಿ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದರು. ಇನ್ನು ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ಮಧ್ಯಾಹ್ನವೇ ಕುಟುಂಬ ಕಾಶ್ಮೀರಕ್ಕೆ ತೆರಳಿದೆ.
ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಹಂಬಲದಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಭಾರತ ಮಾತೆಯ ಕಾವಲಿಗೆ ನಿಂತ ಬೆಂಗಳೂರಿನ ಅಕ್ಷಯ್ ಗಿರೀಶ್ ಕುಮಾರ್ ಇಂದು ನಮ್ಮಮೊಂದಿಗಿಲ್ಲ. ಅವರಿಗೊಂದು ಹೆಮ್ಮೆಯ ಸಲಾಂ ಹೇಳೋಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.