ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ದಿಟ್ಟ ಕ್ರಮಕ್ಕೆ ಇಡೀ ದೇಶಾದ್ಯಂತ ಸಂಭ್ರಮ ವ್ಯಕ್ತವಾಗುತ್ತಿದೆ. ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಸಹ 370ನೇ ಆರ್ಟಿಕಲ್ ರದ್ದು ವಿಚಾರದ ಬಗ್ಗೆ ಏನು ಹೇಳಿದ್ದಾರೆ?
ನವದೆಹಲಿ(ಆ. 05) ಆರ್ಟಿಕಲ್ 370 ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸ್ವಾಗತ ಮಾಡಿದ್ದಾರೆ.
ಇದೊಂದು ದಿಟ್ಟ ತೀರ್ಮಾನ ಆಗಿದೆ. ದೇಶದ ಐಕ್ಯತೆಯನ್ನು ಕಾಪಾಡುವಲ್ಲಿ ಇದೊಂದು ಮಹತ್ವದ ತೀರ್ಮಾನ ಆಗಲಿದೆ ಎಂದು ಹೇಳಿದ್ದಾರೆ.
ಜನಸಂಘ ಹುಟ್ಟಿಕೊಂಡಾಗಲೇ ಈ 370ನೇ ಆರ್ಟಿಕಲ್ ರದ್ದು ನಮ್ಮ ಮುಂದಿನ ಗುರಿಯಾಗಿತ್ತು. ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಈ ಐತಿಹಾಸಿಕ ತೀರ್ಮಾನಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ತೆಗೆದುಕೊಂಡಿರುವ ದಿಟ್ಟ ಕ್ರಮದ ನಂತರ ಲಡಾಕ್ ಚಂಡಿಗಢದ ರೀತಿ ಆಡಳಿತ ನಡೆಸುಕೊಂಡುಹೋದರೆ ಜಮ್ಮು ಮತ್ತು ಕಾಶ್ಮೀರ ದೆಹಲಿ ಮತ್ತು ಪಾಂಡೀಚೇರಿಯಂತೆ ವಿಧಾನಸಭೆ ಒಳಗೊಳ್ಳಲಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಐತಿಹಾಸಿಕ ನಿರ್ಣಯ
ಭಾರತೀಯ ಜನಸಂಘ (ಬಿಜೆಎಸ್ ಅಥವಾ ಜನಸಂಘ ಎಂದು ಪ್ರಖ್ಯಾತಿ) ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷವಾಗಿ ರೂಪುಗೊಂಡಿದ್ದ ಇತಿಹಾಸ ಇದೆ. ಇದು 1951 ರಿಂದ 1980ರ ವರೆಗೆ ಅಸ್ತಿತ್ವದಲ್ಲಿತ್ತು. ನಂತರ ಇದೇ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾಗಿ ರೂಪುಗೊಂಡಿತು.
ಭಾರತೀಯ ಜನಸಂಘವನ್ನು 1951ರ ಅಕ್ಟೋಬರ್ 21 ರಂದು ಶ್ಯಾಮ್ ಪ್ರಸಾದ್ ಮುಖರ್ಜಿಯವರು ಪ್ರಾರಂಭಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಇದಕ್ಕೆ ಬೆನ್ನೆಲುಬಾಗಿ ನಿಂತಿತು.