ಕೇರಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ

By Suvarna Web DeskFirst Published Jan 19, 2017, 11:47 AM IST
Highlights

ಎರಡು ದಿನಗಳ ಹಿಂದೆ ಬ್ರೆನ್ನೆನ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಆರೆಸ್ಸೆಸ್-ಬಿಜೆಪಿ ಗುಂಪು ದಾಳಿ ನಡೆಸಿತ್ತು. ಈ ಘಟನೆಗೆ ಪ್ರತೀಕಾರವಾಗಿ ನಿನ್ನೆ ರಾತ್ರಿ ಬಿಜೆಪಿ ಕಾರ್ಯಕರ್ತನ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಣ್ಣೂರು(ಜ. 19): ದೇವರ ನಾಡಿನಲ್ಲಿ ರಾಜಕೀಯ ರಕ್ತಪಾತ ಮುಂದುವರಿದಿದೆ. ನಿನ್ನೆ ಬುಧವಾರ ರಾತ್ರಿ ತಲಚೇರಿಯ ಅಂಡಾಲೂರ್ ಎಂಬಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಭೀಕರ ಹತ್ಯೆಯಾಗಿದೆ. 52 ವರ್ಷದ ಸಂತೋಷ್ ಮನೆಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಘಟನೆ ನಡೆದಾಗ ಸಂತೋಷ್ ಒಬ್ಬರೇ ಮನೆಯಲ್ಲಿದ್ದರು. ಹಂತಕರು ಮನೆಗೆ ನುಗ್ಗುವುದನ್ನು ತಿಳಿದ ಸಂತೋಷ್ ತನ್ನ ಸ್ನೇಹಿತರಿಗೆ ಸಹಾಯ ಕೋರಿದರಾದರೂ ಏನೂ ಪ್ರಯೋಜನವಾಗಲಿಲ್ಲ. ಗೆಳೆಯರು ಬರುವಷ್ಟರಲ್ಲಿ ದುಷ್ಕರ್ಮಿಗಳು ತಮ್ಮ ಕೆಲಸ ಪರಾರಿಯಾಗಿಬಿಟ್ಟಿದ್ದರು. ವಿಪರೀತ ರಕ್ತ ಸೋರಿಕೆಯಾದ ಸಂತೋಷ್'ರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ.

ಬಂದ್'ಗೆ ಕರೆ:
ಸಂತೋಷ್ ಕೊಲೆಯ ಹಿಂದೆ ಮಾರ್ಕ್ಸ್'ವಾದಿ ಕಮ್ಯೂನಿಸ್ಟ್ ಪಕ್ಷದ ಕೈವಾಡ ಇದೆ ಎಂದು ಆರೋಪಿಸಿರುವ ಬಿಜೆಪಿ, ಕಣ್ಣೂರು ಜಿಲ್ಲಾ ಬಂದ್'ಗೆ ಕರೆಕೊಟ್ಟಿತು. ಗುರುವಾರ ಆಚರಿಸಲಾದ ಬಂದ್'ಗೆ ಭಾಗಶಃ ಬೆಂಬಲ ಸಿಕ್ಕಿದೆ.

ಆರೆಸ್ಸೆಸ್ ಕಚೇರಿ ಮೇಲೆ ಬಾಂಬ್:
ಬಿಜೆಪಿ ಕಾರ್ಯಕರ್ತ ಸಂತೋಷ್'ರ ಕಗ್ಗೊಲೆ ನಂತರ ಇಂದು ಗುರುವಾರವೂ ಕೂಡ ಬಲಪಂಥೀಯ ಸಂಘಟನೆಗಳ ಮೇಲೆ ದಾಳಿಯಾಗಿದೆ. ತ್ರಿಚಾಂಬರಮ್'ನಲ್ಲಿರುವ ಆರೆಸ್ಸೆಸ್ ಕಚೇರಿ ಮತ್ತು ವಿವೇಕಾನಂದ ಕಾರ್ಯಾಲಯಗಳ ಮೇಲೆ ಬಾಂಬ್ ಹಾಕಲಾಗಿದೆ. ಆದರೆ, ಅದೃಷ್ಟಕ್ಕೆ ಯಾವುದೇ ಜೀವ ಹಾನಿಯಾಗಲಿಲ್ಲ. ಈ ಘಟನೆಗಳ ಬಳಿಕ ಪೊಲೀಸರು ಜಿಲ್ಲೆಯಾದ್ಯಂತ ಹೈಅಲರ್ಟ್ ಆಗಿದ್ದು, ಹೆಚ್ಚಿನ ಕಡೆ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ಇದು ಪ್ರತೀಕಾರದ ದಾಳಿಯೇ?
ಬ್ರೆನ್ನೆನ್ ಕಾಲೇಜಿನಲ್ಲಿ ಎಬಿವಿಪಿ ಮತ್ತು ಎಸ್'ಎಫ್'ಐ ವಿದ್ಯಾರ್ಥಿ ಸಂಘಟನೆಗಳ ನಡುವೆ ಬಹಳ ದಿನಗಳಿಂದ ತಿಕ್ಕಾಟ ನಡೆದಿತ್ತು. ಎರಡು ದಿನಗಳ ಹಿಂದೆ ಟೂರ್'ವೊಂದರಿಂದ ವಾಪಸ್ ಬರುತ್ತಿದ್ದ ಬ್ರೆನ್ನೆನ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಆರೆಸ್ಸೆಸ್-ಬಿಜೆಪಿ ಗುಂಪು ದಾಳಿ ನಡೆಸಿತ್ತು. ಈ ಘಟನೆಗೆ ಪ್ರತೀಕಾರವಾಗಿ ನಿನ್ನೆ ರಾತ್ರಿ ಬಿಜೆಪಿ ಕಾರ್ಯಕರ್ತನ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದೇ ವೇಳೆ, ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದೆಂದು ಮುನ್ನೆಚ್ಚರಿಕೆಯಾಗಿ ಕಣ್ಣೂರು ಜಿಲ್ಲಾಡಳಿತವು ಎಲ್ಲಾ ಪಕ್ಷಗಳ ಸಭೆಯನ್ನು ಕರೆದಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಲು ನೆರವಾಗುವಂತೆ ಎಲ್ಲರಿಗೂ ಮನವಿ ಮಾಡಲಾಗಿದೆ.

click me!