‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತ’

By Web DeskFirst Published Sep 13, 2018, 10:55 AM IST
Highlights

ರಾಜ್ಯದಲ್ಲಿ ರಾಜಕೀಯ ಸ್ಥಿತಿ ಅತ್ಯಂತ ಡೋಲಾಯಮಾನವಾಗಿದ್ದು ಇದೀಗ ಬಿಜೆಪಿ ಸರ್ಕಾರ ರಚನೆಯ ಉತ್ಸಾಹದಲ್ಲಿದೆ. ಸರ್ಕಾರ ರಚನೆ ಮಾಡುವುದು ಖಚಿತ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಶಾಸಕರ ಭಿನ್ನಾಭಿಪ್ರಾಯ ತೀವ್ರಗೊಂಡು ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಡಾಲರ್ಸ್‌ ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರು ಹಾಗೂ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಅವರು, ಕಾಂಗ್ರೆಸ್‌ನಲ್ಲಿಯ ಭಿನ್ನಮತ ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬ ಭವಿಷ್ಯ ನುಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಶುಕ್ರವಾರ ಸಂಜೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರು ಕಾರ್ಯಕಾರಿಣಿ ಸಭೆ ಆರಂಭವಾಗುವ ಮೊದಲೇ ಶನಿವಾರ ಬೆಳಗ್ಗೆ ಬೆಂಗಳೂರಿನ ವಿಮಾನ ಹತ್ತಿದ್ದರು. ಅಂದಿನಿಂದ ಬುಧವಾರದವರೆಗೆ ಯಡಿಯೂರಪ್ಪ ಅವರು ನಿತ್ಯ ತಮ್ಮ ನಿವಾಸದಲ್ಲಿ ವಿವಿಧ ಮುಖಂಡರ ಭೇಟಿ, ಸಮಾಲೋಚನೆಯಲ್ಲೇ ಮುಳುಗಿದ್ದಾರೆ. ಯಾವುದೇ ಸಭೆ ಸಮಾರಂಭಗಳಿಗೂ ತೆರಳದೇ ಲೆಕ್ಕಾಚಾರ ಹಾಕುವುದರಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಶೀಘ್ರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬುದರ ಬಗ್ಗೆ ಪಕ್ಷದ ಇತರ ನಾಯಕರಲ್ಲಿ ಅಷ್ಟಾಗಿ ವಿಶ್ವಾಸ ಕಾಣದಿದ್ದರೂ ಯಡಿಯೂರಪ್ಪ ಮತ್ತವರ ಆಪ್ತರು ಮಾತ್ರ ತುಂಬು ವಿಶ್ವಾಸದಲ್ಲಿದ್ದಾರೆ. ನಾಲ್ಕನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರುವುದಕ್ಕೆ ಯಡಿಯೂರಪ್ಪ ಅವರು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ.

ಯಡಿಯೂರಪ್ಪ ಅವರನ್ನು ಭೇಟಿಯಾಗಲು ಹೋಗುವ ಮೊದಲು ಸರ್ಕಾರ ರಚನೆ ಬಗ್ಗೆ ಅನುಮಾನ ಹೊಂದಿದ್ದವರು ವಾಪಸಾಗುವ ವೇಳೆ ವಿಶ್ವಾಸವನ್ನು ತುಂಬಿಕೊಂಡು ಬರುತ್ತಿದ್ದಾರೆ. ಸ್ವತಃ ಯಡಿಯೂರಪ್ಪ ಅವರು ಆ ಮಟ್ಟಿಗೆ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ. ನೂರಕ್ಕೆ ನೂರರಷ್ಟುಹಾಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಹೊಸದಾಗಿ ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ಬರಲಿದೆ. ಕಾದು ನೋಡಿ ಎಂಬ ಮಾತನ್ನು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

click me!