ಕರ್ನಾಟಕದ ಈ ದೇವಸ್ಥಾನಕ್ಕೆ ಮಹಿಳೆಯರಿಗೆ ಇಲ್ಲ ಪ್ರವೇಶ!

By Web Desk  |  First Published Sep 13, 2018, 9:28 AM IST

ಶಬರಿ ಮಲೆ ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರ ಪ್ರವೇಶ ನಿಷೇಧವನ್ನು ತೆರವು ಮಾಡಿದ ಬೆನ್ನಲ್ಲೇ ಕರ್ನಾಟಕದ ಒಂದು ದೇವಾಲಯದಲ್ಲಿಯೂ ಕೂಡಮಹಿಳೆಯರಿಗೆ ಪ್ರವೇಶವನ್ನು ನಿಷೇದಿಸುವ ವಿಚಾರ ತಿಳಿದು ಬಂದಿದೆ. 


ಹಾಸನ :  ಕೇರಳದ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲದ ವಿಷಯ ಭಾರೀ ಸದ್ದು ಮಾಡಿ ಸವೋಚ್ಛ ನ್ಯಾಯಾಲಯ ನಿಷೇಧ ತೆರವು ಮಾಡಿದ್ದು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಇಂತಹದ್ದೇ ಒಂದು ಘಟನೆ ಕರ್ನಾಟಕ ರಾಜ್ಯದಲ್ಲೂ ನಡೆಯುತ್ತಿದೆ. ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಬೋರ್ಡ್‌ ನೇತು ಹಾಕಲಾಗಿದೆ. ಅಷ್ಟೇ ಅಲ್ಲದೇ ಒಂದು ಸಮುದಾಯದವರಿಗೆ ಮಾತ್ರ ಪ್ರವೇಶ, ಇತರರಿಗೆ ಅಲಿಖಿತ ನಿರ್ಬಂಧ, ಪ್ರತಿ ವರ್ಷದ ಜನವರಿ ತಿಂಗಳ ಹುಣ್ಣಿಮೆಯಲ್ಲಿ ದೇವಸ್ಥಾನದ ಎದುರಿಗೆ ರಸ್ತೆಯಲ್ಲಿ ಮಹಿಳೆಯರು ಓಡಾಡುವುದೂ ಕೂಡ ನಿಷಿದ್ಧ!

ಈ ದೇವಸ್ಥಾನ ಇರೋದು ನಮ್ಮದೇ ರಾಜ್ಯದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ನಾಗಸಮುದ್ರ ಗ್ರಾಮದಲ್ಲಿ. ಇಲ್ಲಿನ ಶ್ರೀಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ನಾಮಫಲಕ ಹಾಕಲಾಗಿದೆ. ಈ ದೇವಾಲಯಕ್ಕೆ ಯಾವುದೇ ವಯಸ್ಸಿನ ಹೆಣ್ಣಿಗೆ ಪ್ರವೇಶ ನಿಷಿದ್ಧ. ಜೊತೆಗೆ ಲಿಂಗಾಯತರನ್ನು ಹೊರತುಪಡಿಸಿ, ಇತರೆ ಜನಾಂಗದವರಿಗೂ ಪ್ರವೇಶವನ್ನು ಅಲಿಖಿತವಾಗಿ ನಿರ್ಬಂಧಿಸಲಾಗಿದೆ.

Tap to resize

Latest Videos

undefined

ಇನ್ನು ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆಯಲ್ಲಿ ಈ ದೇವರ ವಿಶೇಷ ಪೂಜೆ ನಡೆಯುತ್ತದೆಯಂತೆ. ಆ ಸಮಯದಲ್ಲಂತೂ ಈ ದೇವಾಲಯದ ಎದುರಿನ ರಸ್ತೆಯಲ್ಲಿ ಮಹಿಳೆಯರು ತಿರುಗಾಡುವುದೂ ನಿಷಿದ್ಧ. ಇತರೆ ಜನಾಂಗದವರೂ ಆ ಅವಧಿಯಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಾರೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ಸಿದ್ಧ ಪುರುಷ:  ನಾಗ ಸಮುದ್ರದ ಮಹದೇಶ್ವರ ದೇವಾಲಯದ ಹೊರಗೆ ಬಹಿರಂಗವಾಗಿಯೇ ‘ಹೆಂಗಸರಿಗೆ ಪ್ರವೇಶ ಇಲ್ಲ’ ಫಲಕವನ್ನು ದೇವಸ್ಥಾನದಲ್ಲಿ ಹಾಕಲಾಗಿದೆ.

ಬೃಹತ್‌ ನೇರಳೆ ಮರದ ಬುಡದಲ್ಲಿ ಮೂಡಿರುವ ಆಕೃತಿಯೇ ಇಲ್ಲಿ ಮಹದೇಶ್ವರಸ್ವಾಮಿಯಾಗಿ ಪೂಜಿಸಲ್ಪಡುತ್ತಿರುವ ದೇವರು. ಮಹದೇಶ್ವರಸ್ವಾಮಿಯವರು ಒಬ್ಬ ಸಿದ್ಧಪುರುಷರಾಗಿದ್ದು, ಊರಿನಿಂದ ಹೊರಗೆ ಬೆಟ್ಟಗುಡ್ಡಗಳ ಗುಹೆಗಳಲ್ಲಿ ವಾಸಿಸುತ್ತಿದ್ದರು. ಅವರು ತುಂಬಾ ನಿಯಮದಿಂದ ತಪಸ್ಸನ್ನಾಚರಿಸುತ್ತಿದ್ದರು. ಅವರ ಕಣ್ಣಿಗೆ ಮಹಿಳೆಯರು ಬೀಳುವಂತೆಯೇ ಇರಲಿಲ್ಲ. ಹಾಗಾಗಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂಬುದಾಗಿ ಸ್ಥಳ ಪುರಾಣದಲ್ಲಿ ಹೇಳಲಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಬಲವಂತದ ನಿರ್ಬಂಧವಿಲ್ಲ:

ದೇವಸ್ಥಾನಕ್ಕೆ ಯಾರಿಗೂ ಬಲವಂತವಾಗಿ ನಿರ್ಬಂಧ ವಿಧಿಸಿಲ್ಲ. ಆದರೆ ಲಿಂಗಾಯತರನ್ನು ಹೊರತುಪಡಿಸಿ ಇತರೆ ಜನಾಂಗದವರು ಇಲ್ಲಿಗೆ ಬರಲು ಹೆದರುತ್ತಾರೆ. ಇಲ್ಲಿಗೆ ಬಂದವರು ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ. ಹಾಗಾಗಿ ದೇವಾಲಯದೊಳಕ್ಕೆ ಬರಲು ಹಿಂಜರಿಯುತ್ತಾರೆ ಎಂಬುದು ಇಲ್ಲಿನ ಭಕ್ತರ ವಾದ. ದೇವರಿಗೆ ಎಲ್ಲರೂ ಹರಕೆ ಹೊರುತ್ತಾರೆ. ಬೇಡಿಕೆ ಈಡೇರಿದರೆ ನೂರೊಂದೆಡೆ ಸೇವೆ (ನೂರು ಜನರಿಗೆ ಊಟ) ಅಥವಾ ಸಾವಿರದೊಂದೆಡೆ (ಸಾವಿರ ಜನರಿಗೆ ಊಟ) ಸೇವೆ ಮಾಡುತ್ತೇವೆ ಎಂಬ ಹರಕೆ ಹೊರುತ್ತಾರೆ. ಹರಕೆ ಹೊತ್ತ ಇತರೆ ಜನಾಂಗದವರು ಸೇವೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಇಲ್ಲಿ ಪೂಜೆ ಮಾಡುವವರಿಗೆ ಕೊಟ್ಟರೆ ಅವರು ಶಾಸೊತ್ರೕಕ್ತವಾಗಿ ಪೂಜೆ ಮಾಡಿ ಹಿಂದಿರುಗಿಸುತ್ತಾರೆ. ಹರಕೆ ಹೊತ್ತ ಇತರೆ ಜನಾಂಗದ ಭಕ್ತರು ದೇವಾಲಯದಿಂದ ಹೊರಗೆ ದೂರದಲ್ಲೇ ಪ್ರಸಾದ ಸೇವಿಸಿ ತೆರಳಬೇಕು.

ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸೂಕ್ತ ರೀತಿಯಲ್ಲಿ ಬಗೆಹರಿಸಬೇಕಾಗಿದೆ ಎಂದು ನಾಗರಿಕ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಹೇಶ್‌ ಕುಮಾರ್‌ ಆಗ್ರಹಿಸಿದ್ದಾರೆ.

ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆಯಲ್ಲಿ ಈ ದೇವರಿಗೆ ವಿಶೇಷ ಪೂಜೆ ಇರುತ್ತದೆ. ಆಗ ಸಾವಿರಾರು ಜನ ವೀರಶೈವ ಲಿಂಗಾಯತ ಭಕ್ತರು ಬಂದು ಇಲ್ಲಿ ಸೇರುತ್ತಾರೆ. ಇವರಿಗೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಆ ಸಂದರ್ಭದಲ್ಲಿ ಇತರೆ ಜನಾಂಗದವರು ಇತ್ತ ಸುಳಿಯುವುದೂ ಇಲ್ಲ ಎನ್ನಲಾಗಿದೆ. ವಿಪರ್ಯಾಸವೆಂದರೆ ಈ ದೇವಾಲಯಕ್ಕೆ ಮಹಿಳಾ ಸಂಘವೊಂದು ನೀಡಿರುವ ಕೊಡುಗೆಯನ್ನು ಸ್ವೀಕರಿಸಿ, ಆ ಸಂಘದ ಹೆಸರಿನ ಫಲಕವನ್ನೂ ಹಾಕಿರುವುದು ವಿಶೇಷ.

ದೇವರಿಗೆ ಪೂಜೆ ಮಾಡುವವರು ದೇವರಿಗೆ ಮುಡಿಸಿರುವ ತುಂಬೆ ಹೂವುಗಳನ್ನು ಒಂದು ಬಾರಿಗೆ ಎತ್ತಿಕೊಂಡು ಎಣಿಸುತ್ತಾರೆ. ಸಮ ಸಂಖ್ಯೆಯ ಹೂವುಗಳು ಬಂದಿದ್ದರೆ ನಮ್ಮ ಇಷ್ಟಾರ್ಥ ನೆರವೇರುತ್ತದೆ, ಬೆಸ ಸಂಖ್ಯೆಯ ಹೂವುಗಳು ಬಂದಿದ್ದರೆ ನೆರವೇರುವುದಿಲ್ಲ ಎಂಬುದಾಗಿ ದೇವರ ಅಪ್ಪಣೆಯಾಗಿದೆ ಎಂದರ್ಥ.

click me!