ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಟಿಕೆಟ್ ಫೈಟ್

By Suvarna Web DeskFirst Published Apr 7, 2018, 12:22 PM IST
Highlights

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಗಾಗಿ ಪಕ್ಷದ ಹಿರಿಯ ನಾಯಕರ ನಡುವೆ ಪೈಪೋಟಿ ಆರಂಭವಾಗಿದೆ.

ಬೆಂಗಳೂರು : ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಗಾಗಿ ಪಕ್ಷದ ಹಿರಿಯ ನಾಯಕರ ನಡುವೆ ಪೈಪೋಟಿ ಆರಂಭವಾಗಿದೆ.

ಪಕ್ಷ ರಾಜ್ಯ ಕಾರ್ಯದರ್ಶಿಯಾಗಿರುವ ಪಿ.ಮುನಿರಾಜು ಗೌಡ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಸ್ಪಷ್ಟ ಅಭಿಪ್ರಾಯವನ್ನು ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ನೀಡಿದ್ದರೆ, ರಾಜ್ಯ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯೂ ಆಗಿರುವ ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಅವರ ಪರವಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮತ್ತು ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಒಲವು ಹೊಂದಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ನೀಡುವ ಸಂಬಂಧ ಒಮ್ಮತಾಭಿಪ್ರಾಯ ಮೂಡದೇ ಗೊಂದಲ ಹೆಚ್ಚಾದಲ್ಲಿ ಅಂತಿಮವಾಗಿ ಅದು ಕಾಂಗ್ರೆಸ್ಸಿನ ಹಾಲಿ ಶಾಸಕ ಮುನಿರತ್ನ ಅವರಿಗೆ ಮತ್ತೊಮ್ಮೆ ಗೆಲುವು ಸಾಧಿಸಲು ನೆರವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯವೇ ನಿರ್ಣಾಯಕವಾಗಿದೆ. ಇತರ ಹಿಂದುಳಿದ ವರ್ಗಕ್ಕೆ ಸೇರಿದ ಮುನಿರತ್ನ ಅವರನ್ನು ಎದುರಿಸಲು ಒಕ್ಕಲಿಗ ಸಮುದಾಯದ ಮುನಿರಾಜುಗೌಡ ಅವರೇ ಸೂಕ್ತ ಎಂಬುದು ಸಂತೋಷ್ ಸೇರಿದಂತೆ ಸಂಘ ಪರಿವಾರದ ಮುಖಂಡರ ನಿಲುವು. ಜತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮುನಿರಾಜುಗೌಡ ಅವರು ಸ್ಪರ್ಧಿಸಿ ಸೋಲುಂಡಿದ್ದರು.

ಹೀಗಾಗಿ, ಅವರಿಗೆ ಕ್ಷೇತ್ರದ ಪರಿಚಯವೂ ಇದೆ ಎಂದು ವಾದ ಮಂಡಿಸಿದ್ದಾರೆ. ಇದಕ್ಕೆ ಬಿಜೆಪಿಯ ಹಲವು ನಾಯಕರು ಸಹಮತ ವ್ಯಕ್ತಪಡಿಸಿ ದ್ದಾರೆ ಎನ್ನಲಾಗಿದೆ. ಆದರೆ, ಅಶೋಕ್ ಅವರಾಗಲಿ ಅಥವಾ ಯಡಿಯೂರಪ್ಪ ಅವರಾಗಲಿ ಈ ವಾದವನ್ನು ಪೂರ್ಣವಾಗಿ ಒಪ್ಪುತ್ತಿಲ್ಲ. ಶಾಸಕ ಮುನಿರತ್ನ ಅವರು ಮಹಿಳೆಯರ ವಿಷಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿ ಕೊಂಡಿದ್ದಾರೆ. ಅದರ ಲಾಭವನ್ನು ಮಹಿಳೆಯೊಬ್ಬರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಪಡೆಯಬಹುದಾಗಿದೆ. ಜತೆಗೆ ಜೆಡಿಎಸ್ ಕೂಡ ಒಕ್ಕಲಿಗ ಸಮುದಾಯದವರಿಗೇ ಟಿಕೆಟ್ ನೀಡುವುದರಿಂದ ಮತ ವಿಭಜನೆಯಾಗುವ ಸಾಧ್ಯತೆಯಿದೆ. ಅದರ ಬದಲು ವಿದ್ಯಾವಂತ ಹಾಗೂ ಯುವಜನತೆಯನ್ನು ಆಕರ್ಷಿಸಲು ಶಿಲ್ಪಾ ಗಣೇಶ್ ಅವರನ್ನು ಕಣಕ್ಕಿಳಿಸಬೇಕು. 

ಅಲ್ಲದೇ ಈ ಹಿಂದೆ ಬಿಬಿಎಂಪಿ, ಜಿಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪದೇ ಪದೇ ಸೋತ ಅಭ್ಯರ್ಥಿಯಾಗಿರುವ ಮುನಿರಾಜು ಅವರಿಗೆ ಏಕೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಅಂತಿಮವಾಗಿ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರಾಗಲಿ ದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

click me!