ಬಿಜೆಪಿ ಸಂಸದೀಯ ಸಮಿತಿ ಪುನಾರಚನೆ?

By Suvarna Web DeskFirst Published Sep 16, 2017, 6:09 PM IST
Highlights

ಬಿಜೆಪಿಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯನ್ನು ಪುನಾರಚಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದಾಗಿದ್ದಾರೆ. ಬಿಜೆಪಿ ಹಿರಿಯ ಮುಖಂಡ ವೆಂಕಯ್ಯನಾಯ್ಡು ಅವರು ಉಪರಾಷ್ಟ್ರಪತಿ ಆಗಿದ್ದರಿಂದ ಅವರು ಬಿಜೆಪಿಯ ಹಾಗೂ ಮಂಡಳಿಯ ಸದಸ್ಯರಾಗಿ ಉಳಿದಿಲ್ಲ. ಹೀಗಾಗಿ ಈ 2 ಉನ್ನತ ಮಂಡಳಿಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ.

ನವದೆಹಲಿ: ಬಿಜೆಪಿಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯನ್ನು ಪುನಾರಚಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದಾಗಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ವೆಂಕಯ್ಯನಾಯ್ಡು ಅವರು ಉಪರಾಷ್ಟ್ರಪತಿ ಆಗಿದ್ದರಿಂದ ಅವರು ಬಿಜೆಪಿಯ ಹಾಗೂ ಮಂಡಳಿಯ ಸದಸ್ಯರಾಗಿ ಉಳಿದಿಲ್ಲ. ಹೀಗಾಗಿ ಈ 2 ಉನ್ನತ ಮಂಡಳಿಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರನ್ನು ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಬಿಜೆಪಿ ಉನ್ನತ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ತಮ್ಮನ್ನು ಈ ವಿಷಯವಾಗಿ ಅಮಿತ್ ಶಾ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಭಾವಿಸಿದ್ದಾರೆ.

ಅಲ್ಲದೇ ಮಹೇಂದ್ರನಾಥ್ ಪಾಂಡೆ ಅವರನ್ನು ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಿಸುವಾಗಲೂ ಅಮಿತ್ ಶಾ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು ಬಿಜೆಪಿ ಉನ್ನತ ಮುಖಂಡರ ಸಿಟ್ಟಿಗೆ ಕಾರಣವಾಗಿತ್ತು. ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದ ನಾಯ್ಡು ಅವರ ಜಾಗಕ್ಕೆ ದಕ್ಷಿಣ ಭಾರತದವರೇ ಆದ ನಿರ್ಮಲಾ ಸೀತಾರಾಮನ್ ಅವರನ್ನು ಕರೆತರಲು ಅಮಿತ್ ಶಾ ಬಯಸಿದ್ದಾರೆ.

ಅಮಿತ್ ಶಾ ಮುಖ್ಯಸ್ಥರಾಗಿರುವ 11 ಸದಸ್ಯರ ಬಿಜೆಪಿ ಸಂಸದೀಯ ಮಂಡಳಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಥಾವರ್‌ಚಂದ್ ಗೆಹ್ಲೋಟ್, ಜಗತ್ ಪ್ರಕಾಶ್ ನಡ್ಡಾ, ಅನಂತ್ ಕುಮಾರ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರನ್ನು ಒಳಗೊಂಡಿದೆ.

ಬಿಜೆಪಿ ಸಂವಿಧಾನದ ಪ್ರಕಾರ ಸಂಸದೀಯ ಮಂಡಳಿಯ ಅಧ್ಯಕ್ಷರಾಗಿ ರುವ ಶಾ, ಹಾಲಿ ಪ್ರಧಾನ ಕಾರ್ಯದರ್ಶಿಗಳ ಪೈಕಿ ಒಬ್ಬರನ್ನು ಮಂಡಳಿಯ ಕಾರ್ಯದರ್ಶಿಯನ್ನಾಗಿ ನೇಮಿಸಬೇಕು. ಈ ಹುದ್ದೆಗೆ ರಾಮ್ ಮಾಧವ್ ಅವರ ಹೆಸರು ಕೇಳಿಬರುತ್ತಿದೆ.

2016ರಲ್ಲಿ ಅವಿರೋಧವಾಗಿ ಬಿಜೆಪಿ ಸಂಸದೀಯ ಮಂಡಳಿಯ ಅಧ್ಯಕ್ಷರಾಗಿ ಅವಿರೋಧವಾಗಿ 2ನೇ ಬಾರಿಗೆ ಆಯ್ಕೆಯಾದ ಬಳಿಕ ಅಮಿತ್ ಶಾ ಅವರು ಹಳೆಯ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬರುವ ಗುಜರಾತ್, ಕರ್ನಾಟಕ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಸದೀಯ ಮಂಡಳಿ ಪುನಾರಚಿಸಲು ಮುಂದಾಗಿದ್ದಾರೆ.

click me!