
ನವದೆಹಲಿ(ಏ. 19): ಇತ್ತೀಚೆಗೆ ನಡೆದ ದಿಲ್ಲಿಯ ರಜೌರಿ ಗಾರ್ಡನ್ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡ ಹಿನ್ನೆಲೆಯಲ್ಲಿ ನಗರಪಾಲಿಕೆ ಚುನಾವಣೆಗಳತ್ತ ಎಲ್ಲರ ಕುತೂಹಲ ಮೂಡಿದೆ. ಆಡಳಿತಾರೂಢ ಬಿಜೆಪಿಯನ್ನು ಕಿತ್ತೊಗೆದು ಆಮ್ ಆದ್ಮಿ ಆಡಳಿತವನ್ನು ಪಾಲಿಕೆಯಲ್ಲಿ ಪ್ರತಿಷ್ಠಾಪಿಸುವ ಕೇಜ್ರಿವಾಲ್ ಪಡೆಯ ಹುಮ್ಮಸ್ಸಿಗೆ ರಜೋರಿ ಗಾರ್ಡನ್ ಫಲಿತಾಂಶ ತಣ್ಣೀರೆರಚಿದೆ. ದಿಲ್ಲಿ ಪಾಲಿಕೆ ಕ್ಷೇತ್ರಗಳಲ್ಲಿ ಆಪ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ದಿಲ್ಲಿಯ 272 ವಾರ್ಡ್'ಗಳ ಪೈಕಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆಯಂತೆ.
ಈ ಸಂಬಂಧ ಬಿಜೆಪಿ ಮುಖಂಡ ತಜೀಂದರ್ ಪಾಲ್ ಬಗ್ಗಾ ಅವರು ಟ್ವೀಟ್ ಮಾಡಿದ್ದಾರೆ. ಆಮ್ ಆದ್ಮಿಯ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ 202 ಕ್ಷೇತ್ರಗಳಲ್ಲಿ ಗೆಲ್ಲುವ ಸೂಚನೆ ಸಿಕ್ಕಿದೆ. ಹೀಗಾಗಿ, ಕೇಜ್ರಿವಾಲ್ ಅವರು ಸಮೀಕ್ಷೆಯನ್ನು ಬಹಿರಂಗಗೊಳಿಸಿಲ್ಲ. ಕೇಜ್ರಿವಾಲ್'ಗೆ ಭಯ ಹುಟ್ಟಿದೆ ಎಂದು ಬಗ್ಗಾ ಅಭಿಪ್ರಾಯಪಟ್ಟಿದ್ದಾರೆ.
ರಜೌರಿ ಗಾರ್ಡನ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಕ್ಷೇತ್ರವನ್ನು ಪ್ರತಿನಿಧಿಸಿದ್ದ ಆಪ್ ಶಾಸಕರು ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಜನತೆ ಕೋಪಗೊಂಡು ತಮ್ಮ ಪಕ್ಷದ ವಿರುದ್ಧವಾಗಿ ಮತಹಾಕಿದರೆಂದು ಕೇಜ್ರಿವಾಲ್ ವಿಶ್ಲೇಷಿಸಿದ್ದಾರೆ.
ಇದೇ ಏಪ್ರಿಲ್ 23ರಂದು ದಿಲ್ಲಿಯ ಮಹಾನಗರಪಾಲಿಕೆಗೆ ಚುನಾವಣೆ ನಡೆಯಲಿದೆ. ಇದು ಆಮ್ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಸದ್ಯ, ಪಾಲಿಕೆ ಆಡಳಿತವು ಬಿಜೆಪಿ ಬಳಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.