’ರಮೇಶ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಫಿಕ್ಸ್..! ಡಿಸಿಎಂ ಸವದಿಗಿಲ್ಲ ಟಿಕೆಟ್..!’

By Web DeskFirst Published Sep 21, 2019, 4:38 PM IST
Highlights

ಉಪ ಚುನಾವಣೆ ಘೋಷಣೆ ಹಿನ್ನೆಲೆ| ರಮೇಶ ಜಾರಕಿಹೊಳಿಗೆ ಟಿಕೇಟ್ ನೀಡ್ತೀವಿ| ಸವದಿಗೆ ಪರ್ಯಾಯ ವ್ಯವಸ್ಥೆ ಮಾಡ್ತೀವಿ| ಅಥಣಿ ಕ್ಷೇತ್ರದಿಂದ ಅನರ್ಹ ಶಾಸಕ ಕುಮಟಳ್ಳಿಗೆ ಟಿಕೇಟ್ ಪಕ್ಕಾ

ಬೆಂಗಳೂರು[ಸೆ.21]: ಕರ್ನಾಟಕದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಯಾರಿಗೆಲ್ಲಾ ಟಿಕೆಟ್ ಸಿಗುತ್ತೆ? ಅನರ್ಹ ಶಾಸಕರ ಕತೆ ಏನು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹೀಗಿರುವಾಗ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವರೊಬ್ಬರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ರಮೇಶ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಸಿಗೋದು ಪಕ್ಕಾ ಎಂದಿದ್ದಾರೆ.

ಹೌದು ಚುನಾವಣೆ ಸಂಬಂಧ ಪ್ರತಿಕ್ರಿಯಿಸಿರುವ ವಿಜಯಪುರದ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ 'ರಮೇಶ್ ಜಾರಕಿಹೊಳಿಗೆ ಟಿಕೆಟ್ ನೀಡ್ತೀವಿ. ಅವರನ್ನ ಬಿಟ್ರೆ ಹೇಗೆ? ಅವರೇ ಪಾತ್ರದಾರಿ' ಎನ್ನುವ ಮೂಲಕ ಗೋಕಾಕ್ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿಗೆ ಟಿಕೆಟ್ ನೀಡುವುದನ್ನು ಖಚಿತಪಡಿಸಿದ್ದಾರೆ. ಹೀಗಿದ್ದರೂ ಅನರ್ಹಗೊಂಡಿರುವ ರಮೇಶ್ ಜಾರಕಿಹೊಳಿ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿದೆ ಎಂಬುವುದು ಉಲ್ಲೇಖನೀಯ.

ಇದೇ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಕುರಿತಾಗಿಯೂ ಮಾತನಾಡಿದ ಜಿಗಜಿಣಗಿ 'ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ಇಲ್ಲ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡ್ತೀವಿ. ಹೈಕಮಾಂಡ್ ಏನಾದರು ವ್ಯವಸ್ಥೆ ಮಾಡುತ್ತೆ. ಪಕ್ಷ ಬಿಟ್ಟು ಬಂದವರಿಗೆ ಅನ್ಯಾಯ ಮಾಡಲ್ಲ' ಎಂದಿದ್ದಾರೆ. ಈ ಮೂಲಕ ಅಥಣಿ ಕ್ಷೇತ್ರದಿಂದ ಅನರ್ಹ ಶಾಸಕ ಕುಮಟಳ್ಳಿಗೆ ಟಿಕೆಟ್ ನೀಡುವುದು ಪಕ್ಕಾ ಎಂದಿದ್ದಾರೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

click me!