ಅಂಡಮಾನ್‌ನಲ್ಲಿ ಬಿಜೆಪಿ ದಕ್ಷಿಣ ರಾಜ್ಯಗಳ ಸಭೆ!

By Web DeskFirst Published May 21, 2019, 8:10 AM IST
Highlights

ಅಂಡಮಾನ್‌ನಲ್ಲಿ ಬಿಜೆಪಿ ದಕ್ಷಿಣ ರಾಜ್ಯಗಳ ಸಭೆ| ಸಂತೋಷ್‌ ನೇತೃತ್ವದಲ್ಲಿ ಪ್ರವಾಸ, ಸಭೆ| ರಾಜ್ಯಾಧ್ಯಕ್ಷರ ಆಯ್ಕೆಗೂ ಇದಕ್ಕೂ ಸಂಬಂಧವಿಲ್ಲ: ಸಿ.ಟಿ.ರವಿ

ಬೆಂಗಳೂರು[ಮೇ.21]: ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನೇತೃತ್ವದಲ್ಲಿ ಅಂಡಮಾನ್‌ ದ್ವೀಪದಲ್ಲಿ ಪಕ್ಷದ ದಕ್ಷಿಣ ರಾಜ್ಯಗಳ ಚುನಾವಣಾ ಪ್ರಭಾರಿಗಳ ಎರಡು ದಿನಗಳ ವಿಶೇಷ ಸಭೆ ನಡೆಯಿತು.

ಸಂತೋಷ್‌ ಅವರು ದಕ್ಷಿಣ ಭಾರತದ ರಾಜ್ಯಗಳ ಉಸ್ತುವಾರಿ ಹೊತ್ತಿದ್ದಾರೆ. ಹೀಗಾಗಿ, ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಚರ್ಚೆಯ ಜೊತೆಗೆ ಪ್ರವಾಸವೂ ಆಯಿತು ಎಂಬ ಉದ್ದೇಶದಿಂದ ಈ ಸಭೆ ಹಮ್ಮಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಆದರೆ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಂತರ ಯಾರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬುದನ್ನು ಚರ್ಚಿಸುವ ಸಂಬಂಧ ಸಂತೋಷ್‌ ಅವರು ತಮ್ಮ ಆಪ್ತರನ್ನು ಸಭೆಯ ನೆಪದಲ್ಲಿ ಅಂಡಮಾನ್‌ ನಿಕೋಬಾರ್‌ಗೆ ಕರೆದೊಯ್ದಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ನಂತರ ಅದನ್ನು ಪಕ್ಷದ ನಾಯಕರು ಸ್ಪಷ್ಟವಾಗಿ ತಳ್ಳಿ ಹಾಕಿದರು.

ಅಂಡಮಾನ್‌ ನಿಕೋಬಾರ್‌ನ ಪಕ್ಷದ ಚುನಾವಣಾ ಉಸ್ತುವಾರಿಯಾಗಿದ್ದ ಶಾಸಕ ಸಿ.ಟಿ.ರವಿ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಆದರೆ, ಇದನ್ನು ನಿರಾಕರಿಸಿರುವ ರವಿ, ಸಂತೋಷ್‌ ಮತ್ತು ನಾನು ಬೇರೆ ಬೇರೆ ಕಡೆ ಇದ್ದೇವೆ. ಅವರು ಪೂರ್ಣಾವಧಿ ಕಾರ್ಯಕರ್ತರನ್ನು ಕರೆದುಕೊಂಡು ಬಂದಿದ್ದಾರೆ. ಚುನಾವಣೆಯಲ್ಲಿ ಕೆಲಸ ಮಾಡಿರುವ ಸದಸ್ಯರನ್ನು ಕರೆದುಕೊಂಡು ಬಂದಿದ್ದಾರೆ ಅಷ್ಟೇ. ಬೇರೆ ಏನೂ ಉದ್ದೇಶ ಇಲ್ಲ ಎಂದು ಸಮಜಾಯಿಷಿ ನೀಡಿದರು.

ನಗರದಲ್ಲಿ ಯಡಿಯೂರಪ್ಪ ಅವರು ಮಾತನಾಡಿ, ಚುನಾವಣೆಯಲ್ಲಿ ಹಗಲಿರುಳೂ ಕೆಲಸ ಮಾಡಿದ ಸ್ನೇಹಿತರು ಅಂಡಮಾನ್‌ ನಿಕೋಬಾರ್‌ಗೆ ಹೋಗಿದ್ದಾರೆ. ಅಲ್ಲಿಯೂ ಅವರು ದೇವರ ದರ್ಶನ ಮಾಡಿಕೊಂಡು ಬರುತ್ತಾರೆ ಎಂದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾತನಾಡಿ, ತಮಿಳುನಾಡು, ಕೇರಳ ರಾಜ್ಯಗಳ ಚುನಾವಣಾ ವಿಶ್ಲೇಷಣೆಗಾಗಿ ಸಂತೋಷ್‌ ಅವರು ಅಂಡಮಾನ್‌ ನಲ್ಲಿ ಎರಡು ದಿನಗಳ ವಿಶೇಷ ಬೈಠಕ್‌ ಕರೆದಿದ್ದಾರೆ. ಕರ್ನಾಟಕದ ಹೊರಗೆ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಮುಖರು ಬೈಠಕ್‌ನಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!