ಕಾಂಗ್ರೆಸ್‌ನಿಂದ ಹಿಂದೂಗಳ ಕೊಲೆಗಾರರಿಗೆ ಬೆಂಬಲ : ಬಿಜೆಪಿ ನಾಯಕರ ಆಕ್ರೋಶ

Published : Mar 07, 2018, 07:23 AM ISTUpdated : Apr 11, 2018, 12:40 PM IST
ಕಾಂಗ್ರೆಸ್‌ನಿಂದ ಹಿಂದೂಗಳ ಕೊಲೆಗಾರರಿಗೆ ಬೆಂಬಲ : ಬಿಜೆಪಿ ನಾಯಕರ ಆಕ್ರೋಶ

ಸಾರಾಂಶ

ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ನಾಲ್ಕು ದಿನ ಸಂಚರಿಸಿದ ಬಿಜೆಪಿಯ ಜನ ಸುರಕ್ಷಾ ಯಾತ್ರೆ ಮಂಗಳವಾರ ಸಮಾರೋಪ ಕಂಡಿದ್ದು, ಕಾಂಗ್ರೆಸ್‌ ಸರ್ಕಾರಾವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳ ಸರಣಿಯೇ ನಡೆದಿದೆ ಎಂದು ಬಿಜೆಪಿ ನಾಯಕರು ಆಕ್ರೋಶದ ಸುರಿಮಳೆಗೈದರು.

ಮಂಗಳೂರು : ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ನಾಲ್ಕು ದಿನ ಸಂಚರಿಸಿದ ಬಿಜೆಪಿಯ ಜನ ಸುರಕ್ಷಾ ಯಾತ್ರೆ ಮಂಗಳವಾರ ಸಮಾರೋಪ ಕಂಡಿದ್ದು, ಕಾಂಗ್ರೆಸ್‌ ಸರ್ಕಾರಾವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳ ಸರಣಿಯೇ ನಡೆದಿದೆ ಎಂದು ಬಿಜೆಪಿ ನಾಯಕರು ಆಕ್ರೋಶದ ಸುರಿಮಳೆಗೈದರು. ರಾಜ್ಯದಲ್ಲಿ ಶೇ.15ರಷ್ಟಿರುವ ಅಲ್ಪಸಂಖ್ಯಾತರ ಮತಕ್ಕಾಗಿ ಶೇ.80ರಷ್ಟುಹಿಂದೂಗಳನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿರೋದು ಕೊಲೆಗಡುಕರಿಗೆ ಬೆಂಬಲ ನೀಡುವ ‘ನರಹಂತಕ, ಕೊಲೆಗಡುಕ ಸರ್ಕಾರ’. ಮುಂಬರುವ ಚುನಾವಣೆಯಲ್ಲಿ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿಯೇ ತೀರುತ್ತೇವೆ ಎಂದು ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದಿಯಾಗಿ ಎಲ್ಲಾ ಪ್ರಮುಖ ಬಿಜೆಪಿ ಮುಖಂಡರು ಗುಡುಗಿದರು.

ಏತನ್ಮಧ್ಯೆ, ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಈ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸ್‌ಗಳನ್ನು ವಾಪಸ್‌ ತೆಗೆದುಕೊಳ್ಳುತ್ತೇವೆ, ಉತ್ತರಪ್ರದೇಶ ಸರ್ಕಾರದ ಮಾದರಿಯಲ್ಲಿ ಗೂಂಡಾಗಳ ಹುಟ್ಟಡಗಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.

ಬೃಹತ್‌ ಸಮಾವೇಶ: ಮಾ.3ರಂದು ಕೊಡಗಿನ ಕುಶಾಲನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಏಕಕಾಲದಲ್ಲಿ ಆರಂಭವಾಗಿದ್ದ ಜನಸುರಕ್ಷಾ ಯಾತ್ರೆಯು ಮಂಗಳವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾವೇಶಗೊಂಡು ಕರಾವಳಿಯಲ್ಲಿ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. ಯಾತ್ರೆಯ ಭಾಗವಾಗಿ ನಗರದ ವಿವಿಧೆಡೆಯಿಂದ ಜಾಥಾದ ಮೂಲಕ ಬಂದ ಕಾರ್ಯಕರ್ತರು ದಾರಿಯುದ್ದಕ್ಕೂ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಕಿಕ್ಕಿರಿದು ತುಂಬಿದ್ದ ನೆಹರೂ ಮೈದಾನದಲ್ಲಿ ನಡೆದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದ ಪ್ರತಾಪ್‌ ಸಿಂಹ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಸಿದ್ದರಾಮಯ್ಯರನ್ನು ಗುರಿಯಾಗಿರಿಸಿಕೊಂಡು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ಒಂದು ಹಂತದಲ್ಲಿ ತಾಳ್ಮೆ ತಪ್ಪಿ ಮಾತನಾಡಿದ ಅನಂತ ಕುಮಾರ್‌ ಹೆಗಡೆ, ಸಿದ್ದರಾಮಯ್ಯ ಶೇ.15ರಷ್ಟುಅಲ್ಪಸಂಖ್ಯಾತರ ಮತಕ್ಕಾಗಿ ಜೊಲ್ಲು ಸುರಿಸುತ್ತಿದ್ದಾರೆ. ಈ ಮೂಲಕ ಶೇ.80ರಷ್ಟಿರುವ ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ. ತಾಕತ್ತಿದ್ದರೆ ಹಿಂದೂ ಮಠ, ಮಂದಿರಗಳನ್ನು ವಶಪಡಿಸಿಕೊಂಡು ನೋಡಸಿ ಎಂದು ಸವಾಲು ಹಾಕಿದರು. ಜತೆಗೆ, ರಾಜ್ಯದಲ್ಲಿರೋದು ಭಯಾನಕ, ಪಾತಕ, ಕೊಲೆಗಡುಕ ಸರ್ಕಾರ ಎಂದು ಕಿಡಿಕಾರಿದರು. ಈ ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ‘ಪಾಪಿ ಮುಖ್ಯಮಂತ್ರಿ’ ಎಂದು ಜರಿದ ಹೆಗಡೆ, ಇಂಥ ಮುಖ್ಯಮಂತ್ರಿ ಪ್ರಧಾನಿ ಮೋದಿ, ಬಿಎಸ್‌ವೈ, ಯೋಗಿ ಆದಿತ್ಯನಾಥ್‌ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಾರೆ. ಹಾಗಾಗಿ ಅವರಿಗೆ ನಾನು ನನ್ನದೇ ಭಾಷೆಯಲ್ಲಿ ಉತ್ತರ ಕೊಡುತ್ತೇನೆ ಎಂದು ಕಿಡಿಕಾರಿದರು.

ನಂತರ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಹಾಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅಧಿಕಾರಾವಧಿ ಇನ್ನು 60 ದಿನಗಳು ಮಾತ್ರ. ನಂತರ ನೀವು ಅಧಿಕಾರಕ್ಕೆ ಬರುವುದಿಲ್ಲ. ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಈ ಕೊಲೆಗಡುಕ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸ್‌ಗಳನ್ನು ವಾಪಸ್‌ ತೆಗೆದುಕೊಳ್ಳುತ್ತೇವೆ. ಅಲ್ಲದೆ ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿರುವ ಗೂಂಡಾಗಳ ಹುಟ್ಟಡಗಿಸುತ್ತೇವೆ ಎಂದರು.

ರಾಜ್ಯದ ಹಿಂದೂ ಕಾರ್ಯಕರ್ತರ ಬಲಿದಾನವನ್ನು ವ್ಯರ್ಥವಾಗಲು ನಾವು ಬಿಡಲ್ಲ. ಇನ್ನು 60 ದಿನ ಸಹಿಸಿಕೊಳ್ಳಿ, ಮುಂದೆ ಜನತೆಯ ಸ್ವಾಭಿಮಾನ ಹಾಗೂ ನಿರೀಕ್ಷೆಗೆ ಹುಸಿಯಾಗದಂತೆ ಆಡಳಿತ ನಡೆಸುತ್ತೇನೆ. ರಾಜ್ಯದಲ್ಲಿ ಐದು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ 3,760 ರೈತರ ಕುಟುಂಬಗಳಿಗೆ ಹಾಗೂ ಮತೀಯ ಶಕ್ತಿಗಳಿಂದ ಮೃತಪಟ್ಟಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುತ್ತೇನೆ ಎಂದು ಯಡಿಯೂರಪ್ಪ ವಾಗ್ದಾನ ಮಾಡಿದರು.

ಇಲ್ಲಾ್ಯಕೆ ಸಾಧ್ಯವಿಲ್ಲ?-ಯೋಗಿ: ಸಮಾವೇಶದ ಪ್ರಮುಖ ಪ್ರಧಾನ ಭಾಷಣಕಾರರಾಗಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ರಾಜ್ಯ ಸರ್ಕಾರ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲೇ ವಾಗ್ದಾಳಿ ಮುಂದುವರಿಸಿದರು. ಈಶಾನ್ಯ ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡಲು ಸಾಧ್ಯವಾದರೆ ಕರ್ನಾಟಕದಲ್ಲೂ ಅದು ಯಾಕೆ ಸಾಧ್ಯವಿಲ್ಲ? ಭ್ರಷ್ಟಾಚಾರ ಹಾಗೂ ಅಪರಾಧ ಮುಕ್ತ ರಾಜ್ಯಕ್ಕಾಗಿ ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತಗೊಳಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಜಿಹಾದಿ ಶಕ್ತಿಗಳೊಂದಿಗೆ ಕಾಂಗ್ರೆಸ್‌ ಕೈಜೋಡಿಸುತ್ತಿದ್ದು, ಇದರಿಂದಾಗಿ ಕೇವಲ ಹಿಂದೂಗಳಷ್ಟೇ ಅಲ್ಲ, ಜನಸಾಮಾನ್ಯರೂ ಹಾಗೂ ಮಹಿಳೆಯರೂ ಅಭದ್ರತೆಯ ಜೀವನ ನಡೆಸುವಂತಾಗಿದೆ. ಭಯೋತ್ಪಾದನೆ, ಸಮಾಜಘಾತುಕ ಶಕ್ತಿಗಳ ಅಟ್ಟಹಾಸ ಹಾಗೂ ರಾಷ್ಟ್ರವಿರೋಧಿ ಕೃತ್ಯಗಳು ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿವೆ. ಇದನ್ನು ಹೋಗಲಾಡಿಸಬೇಕಾದರೆ ಇಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂದು ಹೇಳಿದರು.

ಭ್ರಷ್ಟಾಚಾರಮುಕ್ತ ಮಾಡ್ತೀವಿ

ಅಪರಾಧ, ಭ್ರಷ್ಟಾಚಾರದಿಂದ ಉತ್ತರ ಪ್ರದೇಶ ತುಂಬಿ ತುಳುಕುತ್ತಿತ್ತು. ನಮ್ಮ ಸರ್ಕಾರ ಬಂದ ಬಳಿಕ ಅದನ್ನೆಲ್ಲ ಕಿತ್ತೊಗೆದಿದ್ದೇವೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸಿದ್ದರಾಮಯ್ಯ ಆಡಳಿತದಲ್ಲೂ ಕರ್ನಾಟಕದಲ್ಲಿ ಅಪರಾಧ, ಭ್ರಷ್ಟಾಚಾರ ಮಿತಿ ಮೀರಿದೆ. ತ್ರಿಪುರ, ನಾಗಾಲ್ಯಾಂಡ್‌, ಮೇಘಾಲಯದಂತೆ ಕರ್ನಾಟಕದಲ್ಲೂ ಕಾಂಗ್ರೆಸ್‌ ಅನ್ನು ಕಿತ್ತೊಗೆಯುತ್ತೇವೆ. ದೇಶವನ್ನು ಕಾಂಗ್ರೆಸ್‌ ಮುಕ್ತಗೊಳಿಸುತ್ತೇವೆ.

- ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಮುಖ್ಯಮಂತ್ರಿ

ಅಧಿಕಾರಕ್ಕೆ ಬಂದ 24 ತಾಸಲ್ಲಿ ಹಿಂದೂಗಳ ಕೇಸ್‌ ವಾಪಸ್‌

ರಾಜ್ಯದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಈ ಹತ್ಯೆಗೆ ಜನರೇ ಪಾಠ ಕಲಿಸುತ್ತಾರೆ. ಕೊಲೆಗಡುಕರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ. ರಾಜ್ಯದ ಜನತೆ ಸಿದ್ದರಾಮಯ್ಯ ಸರ್ಕಾರವನ್ನು ಮನೆಗೆ ಕಳುಹಿಸಲು ಸಿದ್ಧರಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುತ್ತೇವೆ. ಅಲ್ಲದೆ, ಹತ್ಯೆಯಾದ ಕಾರ್ಯಕರ್ತರ ಕುಟುಂಬಕ್ಕೆ ಪರಿಹಾರ ಹೆಚ್ಚಿಸುತ್ತೇವೆ.

- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ