ಕರ್ನಾಟಕದ ಯೋಗಿಗಳ ಹುಡುಕಾಟದಲ್ಲಿ ಬಿಜೆಪಿ: 20 ಕ್ಷೇತ್ರದಲ್ಲಿ ಸನ್ಯಾಸಿ, RSS ಕಾರ್ಯಕರ್ತರ ತಲಾಶ್

By Suvarna Web DeskFirst Published Mar 27, 2017, 7:12 AM IST
Highlights

ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಂದುತ್ವದ ರಣತಂತ್ರ ಮಾದರಿಯನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅನು ಸರಿಸಲು ಬಿಜೆಪಿ ಮುಂದಾಗಿದ್ದು, ಸುಮಾರು 20 ಕ್ಷೇತ್ರಗಳಲ್ಲಿ ಸ್ವಾಮೀಜಿಗಳು ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಪಕ್ಷದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ಆರಂಭವಾಗಿದೆ.

ಬೆಂಗಳೂರು(ಮಾ.27): ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಂದುತ್ವದ ರಣತಂತ್ರ ಮಾದರಿಯನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅನು ಸರಿಸಲು ಬಿಜೆಪಿ ಮುಂದಾಗಿದ್ದು, ಸುಮಾರು 20 ಕ್ಷೇತ್ರಗಳಲ್ಲಿ ಸ್ವಾಮೀಜಿಗಳು ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಪಕ್ಷದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ಆರಂಭವಾಗಿದೆ.

 

Latest Videos

ಈ ಸಂಬಂಧ ಇತ್ತೀಚೆಗೆ ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ)ನ ಕೇಂದ್ರ ಸ್ಥಾನವಾಗಿರುವ ನಾಗ್ಪುರದಲ್ಲಿ ನಡೆದ ಹಿರಿಯ ಮುಖಂಡರ ಸಭೆಯಲ್ಲಿ ಚರ್ಚೆ ನಡೆದಿದ್ದು, ಚುನಾವಣಾ ರಾಜಕಾರಣದ ಬಗ್ಗೆ ಆಸಕ್ತಿ ಹೊಂದುವುದರ ಜತೆಗೆ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಹಿಂದುತ್ವದ ಪ್ರಬಲ ಪ್ರತಿಪಾದಕ ಸ್ವಾಮೀಜಿಗಳು ಹಾಗೂ ಸಂಘದ ಪೂರ್ಣಾವಧಿ ಕಾರ್ಯಕರ್ತರನ್ನು ಹುಡುಕು ವಂತೆ ರಾಜ್ಯದ ಸಂಘ ಪರಿವಾರದ ಮುಖಂಡ ರಿಗೆ ಸೂಚ್ಯವಾಗಿ ಸಂದೇಶವೊಂದು ರವಾನೆ ಯಾಗಿದೆ ಎಂದು ತಿಳಿದುಬಂದಿದೆ.

 

ಪರಿಣಾಮ, ಕರ್ನಾಟಕದಲ್ಲೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥರ ರೀತಿಯವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಲ್ಲದಿದ್ದರೂ ಶಾಸಕರಾಗಿಯಾದರೂ ಆಯ್ಕೆಯಾಗಲಿ ಎಂಬ ಉದ್ದೇಶದಿಂದ ಹುಡುಕುವ ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾತು ಕೇಳಿಬಂದಿದೆ.

ಅಂತಿಮವಾಗಿ ಎಷ್ಟುಮಂದಿ ಕಣಕ್ಕಿಳಿಯಬಹುದು ಎಂಬುದು ಇನ್ನೂ ಪ್ರಶ್ನಾರ್ಥಕ. ಆದರೆ, ಬಿಜೆಪಿ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಇಂಥದೊಂದು ತಂತ್ರ ರೂಪಿಸುವ ಪ್ರಯತ್ನದಲ್ಲಿ ಸಕ್ರಿಯರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅನುಸರಿಸಿದ ಮಾದರಿಯನ್ನು ಕರ್ನಾಟಕದಲ್ಲೂ ಅನುಷ್ಠಾ ನಗೊಳಿಸಲು ಸಾಧ್ಯ ವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು.

ಈ ಸ್ವಾಮೀಜಿಗಳು ಹಾಗೂ ಸಂಘದ ಕಾರ್ಯಕರ್ತರನ್ನು ವಿಶೇಷವಾಗಿ ರಾಜ್ಯದ 51 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಅಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಮಂತ್ರದ ಭಾಗ ಎನ್ನಲಾದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಜನರ ಬೆಂಬಲ ಗಳಿಸಲು ಇದು ನೆರವಾಗಬಹುದು ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ. ಅವಿವಾಹಿತರಾಗಿರುವ ಇಂಥ ವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಬಗ್ಗೆ ಒಲವು ವ್ಯಕ್ತವಾಗಿರುವುದಕ್ಕೆ ಕಾರಣವೂ ಇದೆ.

ಸ್ವಾಮೀಜಿಗಳು ಮತ್ತು ಸಂಘದ ಪೂರ್ಣಾವಧಿ ಕಾರ್ಯಕರ್ತರು ಅವಿವಾಹಿತರಾಗಿರುತ್ತಾರೆ. ಇಂಥವರು ಚುನಾವಣೆಯಲ್ಲಿ ಗೆದ್ದರೆ ಗೋಹತ್ಯೆ ನಿಷೇಧ ಸೇರಿದಂತೆ ಹಿಂದುತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗಟ್ಟಿನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹೆಚ್ಚು ಮೀನಮೇಷ ಎಣಿಸುವುದಿಲ್ಲ. ಖಡಕ್‌ ಆಗಿ ತೀರ್ಮಾನಗಳನ್ನು ಕೈಗೊಳ್ಳುವುದರಿಂದ ಹಿಂದುತ್ವದ ಅನುಷ್ಠಾನ ವಿಳಂಬವಾಗುವುದಿಲ್ಲ. ಜತೆಗೆ ಜನರಲ್ಲಿ ಹಿಂದುತ್ವದ ಭಾವನೆ ಮೂಡಿಸಲು ಅನುಕೂಲವಾಗುತ್ತದೆ. ಜತೆಗೆ, ಇವರ ಸ್ಪರ್ಧೆ ಸುತ್ತಮುತ್ತಲ ಕ್ಷೇತ್ರಗಳಲ್ಲೂ ಪ್ರಭಾವ ಉಂಟು ಮಾಡಲಿ ಎಂಬ ಉದ್ದೇಶ ಇದೆ.

ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹಿಂದುತ್ವದ ಪ್ರಬಲ ಪ್ರತಿಪಾದಕರ ಸಂಖ್ಯೆ ಕಡಮೆಯೇ ಎನ್ನಬಹುದು. ಇದ್ದರೂ ಅಂಥವರ ಪೈಕಿ ಎಷ್ಟುಮಂದಿ ಹೀಗೆ ಚುನಾವಣಾ ರಾಜಕಾರಣಕ್ಕೆ ಪ್ರವೇಶ ನೀಡುತ್ತಾರೆ ಎಂಬುದು ನಿಶ್ಚಿತವಿಲ್ಲ.

ಶತಾಯಗತಾಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಎಲ್ಲ ರೀತಿಯ ತಂತ್ರಗಳನ್ನು ಅನುಸರಿಸಲು ಮುಂದಾಗಿದೆ. ಇತ್ತೀಚಿನ ಉತ್ತರ ಪ್ರದೇಶದ ಗೆಲುವಿನ ನಂತರ ಅಲ್ಲಿ ಅನುಸರಿಸಿದ ತಂತ್ರೋಪಾಯಗಳನ್ನೇ ಇಲ್ಲೂ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿದ್ದು ಕರ್ನಾಟಕದಲ್ಲೂ ಯಶಸ್ವಿಯಾಗಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಪ್ರಯತ್ನವನ್ನಾದರೂ ಮಾಡಬೇಕು ಎಂಬ ನಿಲವು ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರಲ್ಲಿ ಇರುವುದಂತೂ ಸತ್ಯ.

ವರದಿ ಕನ್ನಡಪ್ರಭ

click me!