ಸಾಲ ಮನ್ನಾ: ಬಿಜೆಪಿಗೆ ಇರಿಸುಮುರುಸು, ಆದರೂ ಮೈಲೇಜ್‌ ಆಸೆ

By Suvarna Web DeskFirst Published Jun 22, 2017, 12:14 PM IST
Highlights

ಸಾಲ ಮನ್ನಾ ಘೋಷಣೆ ಮಾಡುವುದು ವಿಳಂಬವಾಗಬಹುದು ಎಂಬ ಹಿನ್ನೆಲೆಯಲ್ಲಿ ವಿವಿಧ ಹಂತದಲ್ಲಿ ತೀವ್ರ ಪ್ರತಿಭಟನೆ ನಡೆ ಸುವ ಮೂಲಕ ಲಾಭ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಿರೀಕ್ಷಿತವಾಗಿ ಉರುಳಿಸಿದ ದಾಳ ತುಸು ಇರಿಸುಮುರಿಸು ಉಂಟು ಮಾಡಿದಂತಿದೆ.

ಬೆಂಗಳೂರು: ಸಾಲ ಮನ್ನಾ ಘೋಷಣೆ ಮಾಡುವುದು ವಿಳಂಬವಾಗಬಹುದು ಎಂಬ ಹಿನ್ನೆಲೆಯಲ್ಲಿ ವಿವಿಧ ಹಂತದಲ್ಲಿ ತೀವ್ರ ಪ್ರತಿಭಟನೆ ನಡೆ ಸುವ ಮೂಲಕ ಲಾಭ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಿರೀಕ್ಷಿತವಾಗಿ ಉರುಳಿಸಿದ ದಾಳ ತುಸು ಇರಿಸುಮುರಿಸು ಉಂಟು ಮಾಡಿದಂತಿದೆ. ಹೀಗಾಗಿ, ಹೇಗಾದರೂ ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ರೈತರ ಒಲವು ಗಳಿಸಬೇಕು ಎಂಬ ನಿಲವಿಗೆ ಬಂದಿರುವ ಬಿಜೆಪಿ ನಾಯಕರು ಒಂದು ಲಕ್ಷ ರು. ಸಾಲ ಮನ್ನಾ ಮಾಡಬೇಕು ಎಂಬ ಒತ್ತಾಯದ ಧ್ವನಿಯನ್ನೇ ತೀವ್ರಗೊಳಿಸುವ ಚಿಂತನೆಯಲ್ಲಿದ್ದಾರೆ.

ಹಾಗಂತ ಸಿದ್ದರಾಮಯ್ಯ ಅವರು ಸಾಲ ಮನ್ನಾ ಘೋಷಣೆ ಮಾಡುವಲ್ಲಿ ಬಿಜೆಪಿಯ ಪಾತ್ರ ಇಲ್ಲವೇ ಇಲ್ಲ ಎಂದಲ್ಲ. ಯಡಿಯೂರಪ್ಪ ಅವರು ಕಳೆದ ಒಂದೂವರೆ ಎರಡು ತಿಂಗಳಿಂದಲೂ ರೈತರ ಸಾಲ ಮನ್ನಾ ಮಾಡಲೇಬೇಕು. ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ ಎಂದು ಗುಡುಗುತ್ತಲೇ ಇದ್ದರು. ಜುಲೈ 7ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪ್ರತಿಭಟನಾ ಸಭೆಯನ್ನು ಏಕಾಏಕಿ ರದ್ದುಪಡಿಸಲು ಯಡಿಯೂರಪ್ಪ ತಯಾರಿಲ್ಲ. ಪ್ರತಿಭಟನಾ ಸಭೆಯನ್ನು ರದ್ದು ಪಡಿಸುವ ಬದಲು ಅದೇ ದಿನ ಬೇರೊಂದು ರೀತಿಯಲ್ಲಿ ರೈತರ ಪರ ಹೋರಾಟ ನಡೆಸುವುದು ಸೂಕ್ತ. ಈಗ ಘೋಷಣೆ ಮಾಡಿರುವ 50 ಸಾವಿರ ರು. ಸಾಕಾಗುವುದಿಲ್ಲ. ಅದರ ಬದಲು ಕನಿಷ್ಠ ಒಂದು ಲಕ್ಷ ರು. ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ಮಾಡುವ ಬಗ್ಗೆ ಯಡಿಯೂರಪ್ಪ ಅವರು ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

click me!