
ಬೆಂಗಳೂರು (ಸೆ.24): ಕಮಲ ಪಕ್ಷದ ಸದ್ಯದ ಪರಿಸ್ಥಿತಿ ಎಷ್ಟೇ ತೇಪೆ ಹಾಕಿದರೂ ಅದು ನಾಲ್ಕೇ ದಿನಕ್ಕೆ ಉಳಿಯುವಂತಹದ್ದು ಎಂಬ ಸತ್ಯ ರಾಷ್ಟ್ರೀಯ ನಾಯಕರಿಗೆ ತುಂಬಾ ಚೆನ್ನಾಗಿ ಮನದಟ್ಟಾಗಿ ಹೋಗಿದೆ. ಹೀಗಾಗಿಯೇ ಕೇಂದ್ರೀಯ ನಾಯಕತ್ವ ಕೆಲವೊಂದು ಮಾಸ್ಟರ್ ಸ್ಟ್ರೋಕ್ಗಳನ್ನು ಪ್ರಯೋಗಿಸಿದೆ. 2018ಕ್ಕೆ ತಮ್ಮ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿ ತಮ್ಮ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದ ರಾಜ್ಯ ನಾಯಕರಿಗೆ ತಮಗೇ ಟಿಕೆಟ್ ಸಿಗುವುದೇ ಗ್ಯಾರಂಟಿಯಿಲ್ಲ ಎಂಬ ಪರಿಸ್ಥಿತಿ ತಂದಿಟ್ಟಿದೆ ಹೈಕಮಾಂಡ್!
ಪಕ್ಷದಲ್ಲಿ, ಪಕ್ಷದ ಕಚೇರಿಯಲ್ಲಿ, ಜಿಲ್ಲಾಧ್ಯಕ್ಷರ ನೇಮಕಾತಿಯಲ್ಲಿ ತಮ್ಮ ತಮ್ಮ ಆಪ್ತರ ಪ್ರತಿಷ್ಠಾಪನೆಗೆ ಮುಂದಾಗಿದ್ದೇ ರಾಜ್ಯ ಬಿಜೆಪಿಯಲ್ಲಿ ಇಂದಿನ ವಾತಾವರಣ ನಿರ್ಮಾಣವಾಗಲು ಕಾರಣ. ಈ ಸತ್ಯ ರಾಷ್ಟ್ರೀಯ ನಾಯಕರಿಗೂ ಕೂಡಾ ಬಹಳ ಚೆನ್ನಾಗಿ ಅರಿವಿಗೆ ಬಂದಿದೆ. ಅಲ್ಲದೇ ಇದರ ಮುಂದುವರಿದ ಭಾಗವಾಗಿ ಮುಂದಿನ ಚುನಾವಣೆಯಲ್ಲಿ ತಮ್ಮ ತಮ್ಮ ಆಪ್ತರಿಗೆ ಹೆಚ್ಚು ಹೆಚ್ಚು ಟಿಕೆಟ್ ಕೊಡಿಸಿ ಪಾರಮ್ಯ ಮೆರೆಯಲು ಸಿದ್ಧತೆ ಕೂಡಾ ನಡೆದಿತ್ತು. ಆ ಮೂಲಕ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವೇಳೆ ತಮ್ಮ ಪರ ಹೆಚ್ಚು ಬಲ ಇರುವಂತೆ ನೋಡಿಕೊಳ್ಳಲು ರಾಜ್ಯ ನಾಯಕರು ಪ್ಲಾನ್ ಮಾಡಿದ್ದರು. ಈ ವಿಚಾರ ದೆಹಲಿ ತಲುಪಿದ್ದೇ ತಡ ತಮ್ಮ ಆಂತರಿಕ ಸಮೀಕ್ಷಾ ತಂಡದ ಮೂಲಕ ಮಾಹಿತಿ ಕಲೆ ಹಾಕಿದ್ದರು ಅಮಿತ್ ಶಾ, ನಾಯಕರನ್ನು ಟಚ್ ಮಾಡದೇ ನಿಷ್ಠಾವಂತ ಕಾರ್ಯಕರ್ತರನ್ನು ಸಂಪರ್ಕಿಸಿದ ಶಾ, ಎಲ್ಲವನ್ನೂ ಖಚಿತಪಡಿಸಿಕೊಂಡು ದೆಹಲಿಯಲ್ಲೇ ಕುಳಿತು ಮೂರು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದರು.
ದೆಹಲಿಯಿಂದ ಉರುಳಿದ ಮೂರನೇ ದಾಳ ನಿಜವಾಗಿಯೂ ನಾಯಕರ ನಿದ್ದೆಗೆಡಿಸಿಬಿಟ್ಟಿದೆ. ಎರಡು, ಮೂರು, ನಾಲ್ಕು ಬಾರಿ ಒಂದೇ ಕ್ಷೇತ್ರದಿಂದ ಗೆದ್ದು 2018ಕ್ಕೂ ಅದೇ ಕ್ಷೇತ್ರದಿಂದ ಟಿಕೆಟ್ ಕನ್ಫರ್ಮ್ ಅಂತಾ ಕುಳಿತಿದ್ದವರಿಗೆ ಈಗ ನಿದ್ದೆಯಲ್ಲೂ ಕ್ಷೇತ್ರ ಬದಲಾವಣೆಯ ಗುಮ್ಮ ಕಾಡುತ್ತಿದೆ. ಅದಕ್ಕೆ ಮೊದಲ ಮೆಟ್ಟಿಲಾಗಿದ್ದು ರಾಜ್ಯಾಧ್ಯಕ್ಷ ಬಿ,ಎಸ್. ಯಡಿಯೂರಪ್ಪ ಅವರ ಕ್ಷೇತ್ರವನ್ನೇ ಹೈಕಮಾಂಡ್ ಬದಲಾಯಿಸಲು ಹೊರಟಿದ್ದು. ಅಮಿತ್ ಶಾ ನಡೆಯ ಸುಳಿವು ಸಿಕ್ಕಿರುವ ಯಡಿಯೂರಪ್ಪ ಮರು ಮಾತನಾಡದೇ 1980ರ ದಶಕದಿಂದಲೂ ತಮ್ಮನ್ನು ವಿಧಾನಸಭೆ ಕಳುಹಿಸುತ್ತಿರುವ ಶಿಕಾರಿಪುರವನ್ನು ಬಿಟ್ಟು ಹೊರಡಲು ಸಿದ್ಧರಾಗಿದ್ದಾರೆ. ಇದರ ಜೊತೆಯಲ್ಲೇ ರಾಜ್ಯದ ಮತ್ತಷ್ಟು ನಾಯಕರೆನಿಸಿಕೊಂಡವರ ಕ್ಷೇತ್ರಗಳು ಕೂಡಾ ಬದಲಾವಣೆಯಾಗುತ್ತವೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪನವರ ಕ್ಷೇತ್ರವನ್ನೇ ಬದಲಾಯಿಸಲು ಹೈಕಮಾಂಡ್ ಮುಂದಾಗಿರುವಾಗ ನಮ್ಮದೇನು ಲೆಕ್ಕ ಎಂಬ ಭಾವನೆ ಉಳಿದ ನಾಯಕರಲ್ಲಿ ಮೂಡಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಜೊತೆ ಜೊತೆಯಲ್ಲೇ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ವಿಧಾನಸಭೆ ವಿಪಕ್ಷ ಉಪನಾಯಕ ಆರ್. ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಎಸ್. ಮುನಿರಾಜು, ಗೋವಿಂದ ಕಾರಜೋಳ, ಎಸ್. ಆರ್. ವಿಶ್ವನಾಥ್, ಸೇರಿದಂತೆ ಸುಮಾರು 27 ಹಾಲಿ ಶಾಸಕರ ಕ್ಷೇತ್ರಗಳು ಬದಲಾಗುವ ಸಾಧ್ಯತೆಗಳಿವೆ. ಬೆಂಗಳೂರಿನ ಸುಮಾರು 15 ಶಾಸಕರ ಕ್ಷೇತ್ರಗಳು ಬದಲಾಗಲಿದ್ದು, 140 ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ತೀರ್ಮಾನಿಸಿದೆ ಎಂಬ ಸುದ್ದಿ ಈಗ ಹಾಲಿ ಶಾಸಕರನ್ನು ನಿದ್ದೆಗೆಡಿಸಿದೆ. ಇದರ ಜೊತೆಯಲ್ಲೇ, 2018ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಆಗ ತಾವು ಸಚಿವರಾಗಬಹುದು ಎಂಬ ದೂರಾಲೋಚನೆಯಿಂದ ಮತ್ತೆ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಲು ಚಿಂತಿಸಿದ್ದ ಕೆಲವು ಸಂಸದರಿಗೂ ಹೈಕಮಾಂಡ್ ನ ನಿರ್ಧಾರ ತಲೆಕೆಡಿಸಿಬಿಟ್ಟಿದೆ. ಹಾಲಿ ಸಂಸದರ ಪೈಕಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೊರತುಪಡಿಸಿ ಉಳಿದ ಯಾವುದೇ ಸಂಸದರಿಗೆ ಟಿಕೆಟ್ ಇಲ್ಲ ವಿಚಾರ ಕೂಡಾ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂಸದರಿಗೆ ಪೀಕಲಾಟ ತಂದಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.