
ಶಿರಾಳಕೊಪ್ಪ: ನನ್ನ ಜೀವನದಲ್ಲಿ ಶಕ್ತಿ ಕೊಟ್ಟ ಕ್ಷೇತ್ರವೆಂದರೆ ಶಿಕಾರಿಪುರ. ಅಂಥ ಮತದಾರರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪ ಘೋಷಿಸುವ ಮೂಲಕ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಆ ಮೂಲಕ ಕ್ಷೇತ್ರ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇಲ್ಲಿಗೆ ಹತ್ತಿರದ ನೇರಲಗಿ ವೀರಭದ್ರ ದೇವಸ್ಥಾನದ ಬಳಿ ನಡೆದ ಬೂತ್‌ಮಟ್ಟದ ಬೃಹತ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ನನಗೆ ಕ್ಷೇತ್ರದ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 6ನೇ ಅತಿ ಹೆಚ್ಚು ಮತ ಗಳಿಸಿದ ಕ್ಷೇತ್ರ ಎಂಬ ಹೆಗ್ಗಳಿಕೆ ಇದೆ. ರಾಜ್ಯದಲ್ಲಿ 150 ಕ್ಷೇತ್ರ ಗೆಲ್ಲಿಸಬೇಕು. ಈ ಕಾರಣದಿಂದ ಕೇಂದ್ರದ ಇಬ್ಬರು ಮಂತ್ರಿಗಳನ್ನು ಕರ್ನಾಟಕಕ್ಕೆ ಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಬೇಕು ಎಂದರು.
ನೀರಾವರಿ ಯೋಜನೆ ಶತಸಿದ್ಧ: ತಾಲೂಕಿನ ಉಡಗಣಿ- ತಾಳಗುಂದ- ಹೊಸೂರು ಹೋಬಳಿ ಹಾಗೂ ಪಕ್ಕದ ಸೊರಬ ತಾಲೂಕಿನ ನೀರಾವರಿ ಯೋಜನೆ ಮಾಡುವುದು ಶತಸಿದ್ಧ. ಈಗಾಗಲೇ ಕೇಂದ್ರ ನೀರಾವರಿ ಮಂತ್ರಿಗಳನ್ನು ಸಂಪರ್ಕಿಸಲಾಗಿದೆ. ಈ ಕುರಿತು ಕೇಂದ್ರ ನೀರಾವರಿ ತಜ್ಞರ ಸಮಿತಿ ಭೇಟಿ ನೀಡಿ ಹೋಗಿದೆ. ಸ್ಥಳ ವೀಕ್ಷಣೆ ಮಾಡಿದ ಸಮಿತಿ ಕೇಂದ್ರಕ್ಕೆ ಒಳ್ಳೆಯ ವರದಿ ನೀಡಿದೆ.
ನೀರಾವರಿಗೆ ಒಟ್ಟು ₹900 ಕೋಟಿ ಬೇಕಾಗುತ್ತದೆ. ಕೇಂದ್ರದಿಂದ ಶೇ.60 ರಷ್ಟು ಹಣ ಮಂಜೂರಾತಿ ತರಲಾಗುವುದು. ಇನ್ನುಳಿದ ಶೇ.40 ರಷ್ಟನ್ನು ರಾಜ್ಯ ಸರ್ಕಾರ ಕೊಡಲಿ, ಒಂದು ವೇಳೆ ರಾಜ್ಯ ಸರ್ಕಾರ ಹಣ ಮಂಜೂರು ಮಾಡದಿದ್ದರೆ, ನಾವು ಅಧಿಕಾರಕ್ಕೆ ಬಂದಾಗ ಈ ಯೋಜನೆಯನ್ನು ಪೂರ್ಣಗೊಳಿಲಾಗುವುದು. ನಾನು ಮುಖ್ಯಮಂತ್ರಿ ಆಗಿ ಧಿಕಾರಕ್ಕೆ ಬಂದ ಮೇಲೆ ಮುಂದೆ ರಾಜ್ಯದ ನೀರಾವರಿಗೆ ಹಾಗೂ ವಿದ್ಯುತ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದಾಗಿ ತಿಳಿಸಿದರು.
ಶಿಕಾರಿಪುರ ತಾಲೂಕಿಗೆ ರೇಲ್ವೆ ಯೋಜನೆ ಜಾರಿಗೆ ತರಲು ಹಾಗೂ ತಕ್ಷಣ ಸರ್ವೇ ಕಾರ್ಯ ಕೈಗೊಳ್ಳಲು ಭಾನುವಾರ ದೆಹಲಿಗೆ ಹೋಗಲಿರುವುದಾಗಿ ತಿಳಿಸಿದ ಅವರು, ನರೇಂದ್ರ ಮೋದಿ ಅವರ ‘ಸಬ್ ಕೆ ಸಾತ್, ಸಬ್ ಕೆ ವಿಕಾಸ್’ ಎಂಬ ಘೋಷಣೆಯಂತೆ ರಾಜ್ಯದಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿರುವುದರಿಂದ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಗೆಲ್ಲಿಸಲಾಗುವುದು. ಹೊಸದಾಗಿ ಬಂದಿರುವ ನಮಗೆ ಹಠ ಹಾಗೂ ಛಲ ಎರಡೂ ಇವೆ. ಅವನ್ನು ಉಪಯೋಗಿಸಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ಪಣತೊಟ್ಟಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು.
ಜಿಲ್ಲಾ ಅಧ್ಯಕ್ಷ ರುದ್ರೇಗೌಡ ಮಾತನಾಡಿ, ಯಡಿಯೂರಪ್ಪ ಧೀಮಂತ ನಾಯಕ. ಅವರ ಜೀವನವೇ ಒಂದು ಹೋರಾಟವನ್ನಾಗಿ ಮಾಡಿಕೊಂಡಿರುವ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಕೆ.ರೇವಣಪ್ಪ ಮಾತನಾಡಿದರು.
ಶಾಸಕ ಬಿ.ವೈ. ರಾಘವೇಂದ್ರ, ಅಗಡಿ ಅಶೋಕ, ಭದ್ರಾಪುರ ಹಾಲಪ್ಪ, ರಾಮಾ ನಾಯಕ್, ಸೊರಬ ಶ್ರೀಪಾದ ಹೆಗ್ಗಡೆ, ಸಣ್ಣ ಹನುಮಂತಪ್ಪ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.