
ಬೆಂಗಳೂರು(ನ.27): ಟಾರ್ಗೆಟ್ 150 ಪ್ಲಸ್ ಗುರಿಯೊಂದಿಗೆ ಮುಂದುವರಿಯುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಉದ್ಘಾಟಿಸಲಿದ್ದಾರೆ. ಈ ಸಮಾವೇಶದ ಹೈಲೈಟ್ಸ್ ಗಳ ಸವಿವರ ವರದಿ ಇಲ್ಲಿದೆ.
2018ರ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗಲೇ ಭರ್ಜರಿ ತಯಾರಿಗೆ ಸಿದ್ಧತೆ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈ ಸಮಾವೇಶವನ್ನು ಉದ್ಘಾಟಿಸುವ ಸಲುವಾಗಿ ಇಂದು ಬೆಳಗ್ಗೆ ೯:೩೦ರ ಸುಮಾರಿಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ಕುಮಾರಕೃಪಾ ಗೆಸ್ಟ್'ಹೌಸ್'ಗೆ ಬಂದಿಳಿಯಲಿದ್ದಾರೆ. ಅಲ್ಲಿ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ನೇರವಾಗಿ ಅರಮನೆ ಮೈದಾನಕ್ಕೆ ಆಗಮಿಸಿ ಹಿಂದುಳಿದ ವರ್ಗಗಳ ಏಕತಾ ಸಮಾವೇಶ ಉದ್ಘಾಟಿಸಲಿದ್ದಾರೆ. ಈ ವೇಳೆ ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವ ಹಿನ್ನಲೆಯಲ್ಲಿ ಹಾಗೂ ೫೦೦₹ ಹಾಗೂ ೧೦೦೦₹ ನೋಟುಗಳ ಅಮಾನ್ಯೀಕರಣದ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಸಮಾವೇಶಕ್ಕೆ ಶಕ್ತಿ ತುಂಬಲಿರುವ ಬಿಜೆಪಿ ಯುವ ಮೋರ್ಚಾದ ಸುಮಾರು ಐದು ಸಾವಿರ ಕಾರ್ಯಕರ್ತರು ಬೆಳಗ್ಗೆ ಫ್ರೀಢಂ ಪಾರ್ಕ್ ನಿಂದ ಅರಮನೆ ಮೈದಾನಕ್ಕೆ ಬೈಕ್ ರ್ಯಾಲಿ ಮೂಲಕ ಬರಲಿದ್ದಾರೆ. ಇದೇ ಸಮಾವೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಹಿಂದುಳಿದ ಸಂಘಟನೆಗಳ ಮುಖಂಡರಿಗೆ ವಿಶೇಷ ವೇದಿಕೆ ಮೇಲೆ ಆಸನದ ವ್ಯವಸ್ಥೆ ಕಲ್ಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸನ್ಮಾನಿಸಿ ಗೌರವಿಸಲಿದ್ದಾರೆ. ಸಮಾವೇಶ ದ ನಂತರ ಕುಮಾರಕೃಪಾ ಗೆಸ್ಟ್ ಹೌಸ್ ಗೆ ಆಗಮಿಸಲಿರುವ ಅಮಿತ್ ಷಾ ಮೂರು ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹಿಂತಿರುಗಲಿದ್ದಾರೆ.
ನಂತರ ೫ ಗಂಟೆಗೆ ಬಿಜೆಪಿ ಪ್ರಮುಖ ನಾಯಕರು ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ಸೇರಿ ಸಮಾವೇಶೋತ್ತರ ಚರ್ಚೆ ನಡೆಸಲಿದ್ಧಾರೆ. ಇದೇ ವೇಳೆ ಬಿಜೆಪಿಯಿಂದ ಹೊರಬಿದ್ದಿರುವ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಪಕ್ಷಕ್ಕೆ ಬರಲು ಇಚ್ಚಿಸಿರುವ ಪ್ರಮುಖ ನಾಯಕರ ಅಹ್ವಾನಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.