ಬಿಸಿಯೂಟ ಸಿಬ್ಬಂದಿ ಸಂಬಳ ಏರಿಕೆ ಮಾಡಿದ ಸರ್ಕಾರ

By Suvarna Web DeskFirst Published Mar 6, 2018, 8:49 AM IST
Highlights

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆ ಯವರಿಗೆ ಹಾಗೂ ಸಹಾಯಕರಿಗೆ ಮಾಸಿಕ 500 ರು. ಗೌರವ ಸಂಭಾವನೆ ಹೆಚ್ಚಳ ಮಾಡಿ ಸೋಮವಾರ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆ ಯವರಿಗೆ ಹಾಗೂ ಸಹಾಯಕರಿಗೆ ಮಾಸಿಕ 500 ರು. ಗೌರವ ಸಂಭಾವನೆ ಹೆಚ್ಚಳ ಮಾಡಿ ಸೋಮವಾರ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶವು ಜ.1, 2018ರಿಂದ ಪೂರ್ವಾನ್ವಯವಾಗಲಿದೆ. 500 ರು. ಗೌರವ ಸಂಭಾವನೆ ಸೇರಿ ಮುಖ್ಯ ಅಡುಗೆಯವರಿಗೆ 2700 ರು. ಹಾಗೂ ಸಹಾಯಕರಿಗೆ 2600 ರು. ಗೌರವ ಸಂಭಾವನೆ ಪಾವತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಿದೆ.

ಇದರಿಂದ ರಾಜ್ಯದ 1.18 ಲಕ್ಷ ಸಿಬ್ಬಂದಿಗೆ ಗೌರವ ಧನ ಹೆಚ್ಚಳವಾಗಲಿದೆ. 2013-14ರಲ್ಲಿ 1200  ರು. ಹಾಗೂ ಜು.1, 2017ರಂದು 200 ರು. ಗೌರವಧನ ಹೆಚ್ಚಳ ಮಾಡಲಾಗಿತ್ತು. ಇಷ್ಟಾಗಿಯೂ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಳೆದ ಫೆ.8ರಂದು ಅಹೋರಾತ್ರಿ ಮುಷ್ಕರ ನಡೆಸಿದ್ದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅಡಚಣೆ ಉಂಟಾಗಿತ್ತು.

ಆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಸರ್ಕಾರದ ಪ್ರಧಾನಕಾರ್ಯದರ್ಶಿಗಳು ಹಲವು ಸುತ್ತಿನ ಮಾತುಕತೆ ನಡೆಸಿ ಗೌರವ ಧನ ಹೆಚ್ಚಿಸುವುದಾಗಿ ನೀಡಿದ್ದ ಭರವಸೆಯಂತೆ ಗೌರವ ಸಂಭಾವನೆ ಹೆಚ್ಚಳ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯು ತಿಳಿಸಿದೆ.

click me!