ಶಾಸಕ ಹ್ಯಾರಿಸ್ ‘ರಿಂದ ನಡೆಯಿತಾ ಲಾಬಿ..?

By Suvarna Web DeskFirst Published Mar 6, 2018, 8:36 AM IST
Highlights

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಕೇರಳ ಮತ್ತೆ ಪ್ರಯತ್ನ ನಡೆಸಿದ್ದು, ಇದರ ಪರಿಣಾಮವಾಗಿ ಮಾ.6ರ ಮಂಗಳವಾರ ನಗರದ ಅರಣ್ಯ ಭವನದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಉನ್ನತ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳ ಸಭೆ ಆಯೋಜನೆಗೊಂಡಿದೆ.

ಬೆಂಗಳೂರು : ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಕೇರಳ ಮತ್ತೆ ಪ್ರಯತ್ನ ನಡೆಸಿದ್ದು, ಇದರ ಪರಿಣಾಮವಾಗಿ ಮಾ.6ರ ಮಂಗಳವಾರ ನಗರದ ಅರಣ್ಯ ಭವನದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಉನ್ನತ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳ ಸಭೆ ಆಯೋಜನೆಗೊಂಡಿದೆ.

ಕುತೂಹಲಕಾರಿ ಸಂಗತಿಯೆಂದರೆ, ಇಂತಹದೊಂದು ಸಭೆ ಏರ್ಪಡಲು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ನಡೆಸಿದ ವಿಶೇಷ ಪ್ರಯತ್ನ ಕಾರಣವಾಗಿದೆ ಎಂದು ಅರಣ್ಯ ಭವನದ ಮೂಲಗಳು ಹೇಳಿವೆ. ರಾಷ್ಟ್ರೀಯ ಹೆದ್ದಾರಿ 212 (ಮೈಸೂರು-ಕೋಳಿಕ್ಕೋಡ್) ಹಾಗೂ ರಾಷ್ಟ್ರೀಯ ಹೆದ್ದಾರಿ 67(ಮೈಸೂರು-ಗುಂಡ್ಲುಪೇಟೆ-ಊಟಿ- ಮೆಟ್ಟುಪಾಳ್ಯ) ರಲ್ಲಿ ರಾತ್ರಿ ಸಂಚಾರ ನಿಷೇಧ ಬಂಡೀಪು ರದ ವನ್ಯಜೀವಿಗಳ ಪಾಲಿಗೆ ಅತ್ಯಂತ ಮುಖ್ಯ. ಹೈಕೋರ್ಟ್ ಆದೇಶದ ಹಿನ್ನೆಲೆ ಯಲ್ಲಿ ಈ ನಿಷೇಧ ಹೇರಲಾಗಿದೆ. ಆದರೆ, ಕೇರಳದ ವ್ಯಾಪಾರಿಗಳ ಹಿತ ಸಂರಕ್ಷಣೆಗಾಗಿ ಸತತವಾಗಿ ಅಲ್ಲಿನ ರಾಜ್ಯ ಸರ್ಕಾರ ಈ ನಿಷೇಧ ತೆರವುಗೊಳಿಸುವಂತೆ ಕರ್ನಾಟಕದ ಮೇಲೆ ಒತ್ತಡ ತರುತ್ತಿದೆ.

ಈ ಹಿಂದೆಯೂ ಇಂತಹ ಹಲವು ಸಭೆಗಳು ನಡೆದಿದ್ದರೂ ಕರ್ನಾಟಕ ನಿಷೇಧ ತೆರವಿಗೆ ಮುಂದಾಗಿರಲಿಲ್ಲ. ಆದರೆ, ಇತ್ತೀಚೆಗೆ ಶಾಸಕ ಹ್ಯಾರಿಸ್ ಅವರು ಖುದ್ದು ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ತಂದು ಮಾ.6ರ ಸಭೆ ನಿಯೋಜನೆಗೊಳ್ಳುವಂತೆ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ನಿಷೇಧ ತೆರವುಗೊಳಿಸುವ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗಳ ನಡುವೆ ಐದು ಸಭೆಗಳಾಗಿದ್ದು, ಆ ಎಲ್ಲಾ ಸಂದರ್ಭದಲ್ಲೂ ಕರ್ನಾಟಕ ಸರ್ಕಾರ ವನ್ಯಜೀವಿಗಳ ಸಂರಕ್ಷಣೆ ಹಿತಾಸಕ್ತಿಯಿಂದ ರಾತ್ರಿ ಸಂಚಾರದ ನಿಷೇಧ ತೆರವು ಮಾಡುವುದಿಲ್ಲ ಎಂದೇ ಹೇಳಿಕೊಂಡು ಬಂದಿದೆ. ಇದೇ ನಿಲುವನ್ನೇ ಸುಪ್ರೀಂಕೋರ್ಟ್‌ನಲ್ಲೂ ರಾಜ್ಯ ಸರ್ಕಾರ ಪ್ರತಿಪಾದಿಸಿದೆ. ಅಷ್ಟೆ ಅಲ್ಲ, ರಾತ್ರಿ ಸಂಚಾರ ನಿಷೇಧ ಬಳಿಕ ವಾಹನ ಅಪಘಾತದಲ್ಲಿ ಸಾಯುತ್ತಿದ್ದ ವನ್ಯಜೀವಿಗಳ ಸಂಖ್ಯೆ ಗಣ ನೀಯವಾಗಿ ಕಡಿಮೆಯಾಗಿದೆ.

ಏನಿದು ಪ್ರಕರಣ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 67ರಲ್ಲಿ ರಾತ್ರಿ ವೇಳೆ ಅಪಘಾತಕ್ಕೀಡಾಗಿ ಪ್ರಾಣಿಗಳು ಸಾವನ್ನಪ್ಪುವುದನ್ನು ತಡೆಯಲು ರಾಜ್ಯ ಹೈಕೋರ್ಟ್ ಆದೇಶದಂತೆ 2010ರಿಂದ ರಾತ್ರಿ 6 ಗಂಟೆಯಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ, ನಿಷೇಧದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಸರ್ಕಾರ ಬರೋಬ್ಬರಿ 75 ಕೋಟಿ ರು. ವೆಚ್ಚ ಮಾಡಿ ಕರ್ನಾಟಕ ಮತ್ತು ಕೇರಳ ನಡುವೆ ವಾಹನ ಸಂಚಾರಕ್ಕಾಗಿ ಮೈಸೂರು, ಹುಣಸೂರು, ತಿತಿಮತಿ, ಗೋಣಿಕೊಪ್ಪ, ಕುಪ್ಪ, ವೈನಾಡು ಮೂಲಕ ಪರ್ಯಾಯ ರಸ್ತೆ ಮಾರ್ಗವನ್ನು ಅಭಿವೃದ್ಧಿಪಡಿಸಿದೆ. ಈ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿಕೊಡು ವುದಾದರೆ ರಾಷ್ಟ್ರೀಯ ಹೆದ್ದಾರಿ 12 ಮತ್ತು 67ರಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ನಮ್ಮ ಅಭ್ಯಂತ ರವಿಲ್ಲ ಎಂದು ಕೇರಳ ಸರ್ಕಾರ ಕೂಡ ಹಿಂದೆ ಹೈಕೋರ್ಟ್‌ಗೆ ತಿಳಿಸಿತ್ತು.

ಹಾಗಾಗಿ ನ್ಯಾಯಾಲಯ ಈ ಪರ್ಯಾಯ ಮಾರ್ಗ ದುರಸ್ತಿಗೆ ಕರ್ನಾಟಕ ಸರ್ಕಾರಕ್ಕೆ ಆದೇಶ ಮಾಡಿತ್ತು.ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಲಾ ಗಿದ್ದರೂ, ಕೇರಳ ಸರ್ಕಾರ ಮತ್ತೆ ಬಂಡೀಪುರ ರಾ. ಹೆದ್ದಾರಿಗಳಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮೂಲಕ ತನ್ನ ದ್ವಂಧ್ವ ನಿಲುವು ಪ್ರದರ್ಶಿಸಿತ್ತು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಇದೀಗ ಕೇರಳ ಸರ್ಕಾರದ ಪಟ್ಟಭದ್ರರ ಹಿತಾಸಕ್ತಿಗಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅಧಿಕಾರಿಗಳ ಸಭೆ ಕರೆದು ರಾತ್ರಿ ಸಂಚಾರ ತೆರವಿನ ಬಗ್ಗೆ  ಚರ್ಚೆ ನಡೆಸಲು ಮುಂದಾಗಿದ್ದಾರೆ.

click me!