
ಬೀದರ್(ಆ. 17): ಖೂನ್ ಕೇ ಬದ್ಲೆ ಖೂನ್, ಜಾನ್ ಕೇ ಬದ್ಲೆ ಜಾನ್... ನಾನು ಒಂದು ವೇಳೆ ಕಾರ್ಯಕರ್ತರಿಗೆ ಡೈರೆಕ್ಷನ್ ಕೊಟ್ರೆ ನೀನು ಖಲ್ಲಾಸ್... ಹೀಗಂತ ಬಿಎಸ್'ಪಿ ಮುಖಂಡರೊಬ್ಬರು ಬಹಿರಂಗವಾಗಿ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ. ಬಿಎಸ್'ಪಿ ಬೀದರ್ ಜಿಲ್ಲಾಧ್ಯಕ್ಷ ಅಂಕುಶ್ ಗೋಕುಲೆ ಎಂಬುವವರು ಸಾರ್ವಜನಿಕ ಭಾಷಣದ ವೇಳೆ ಹುಮನಾಬಾದ್'ನ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಅವರಿಗೆ ಧಮಕಿ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಬೀದರ್ ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಎಸ್'ಪಿ ಮುಖಂಡ "ನಿನ್ನ ನಂಗಾ ನಾಚ್ ಸಿಡಿ ನನ್ನ ಹತ್ರ ಇದೆ,.. ನಿನ್ನ ಗೂಂಡಾಗಿರಿ ಇನ್ನೂ ಮುಂದೆ ನಡೆಯಲ್ಲ,. ಇಲ್ಲಿಗೆ ನಿನ್ನ ಗೂಂಡಾಗಿರಿ ಖತಂ.." ಎಂದು ಹೇಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಹುಮನಾಬಾದ್ ಕ್ಷೇತ್ರದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ಬಿಎಸ್'ಪಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಸುವರ್ಣನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ ರಾಜಶೇಖರ್ ಪಾಟೀಲ್, ಸಿಡಿಯನ್ನು ಕೂಡಲೇ ಬಹಿರಂಗಪಡಿಸಬೇಕೆಂದು ಅಂಕುಶ್ ಗೋಕಲೆಗೆ ಸವಾಲು ಹಾಕಿದ್ದಾರೆ. ಈ ಹಿಂದೆಯೂ ತನ್ನ ವಿರುದ್ಧ ಸಿಡಿಯನ್ನು ಹೊರತರುತ್ತೇನೆಂದು ಯಾವುದೋ ಸಿಡಿ ಬಹಿರಂಗಪಡಿಸಲಾಗಿತ್ತು. ಆ ಸಿಡಿಯಲ್ಲಿ ಏನೂ ಇರಲಿಲ್ಲ. ಈ ಬಾರಿಯೂ ಅಂಥದ್ದೇ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹುಮ್ನಾಬಾದ್ ಶಾಸಕರು ಹೇಳಿದ್ದಾರೆ. ಆದರೆ, ಖೂನ್ ಕೇ ಬದ್ಲೇ ಖೂನ್ ಎಂದು ಹೇಳುತ್ತಿರುವ ಬಿಎಸ್'ಪಿ ಮುಖಂಡರ ಕಡೆಯವರಿಂದ ತನ್ನ ಜೀವಕ್ಕೆ ಅಪಾಯವಿದ್ದು, ತನಗೆ ಸೂಕ್ತ ರಕ್ಷಣೆ ಬೇಕಿದೆ ಎಂದು ರಾಜಶೇಖರ್ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು, ಬೆದರಿಕೆ ಹಾಕಿರುವ ಬಿಎಸ್'ಪಿ ಮುಖಂಡ ಅಂಕುಶ್ ಗೋಕಲೆ ಕೂಡ ಸುವರ್ಣನ್ಯೂಸ್ ಜೊತೆ ಮಾತನಾಡಿ, ಕಳೆದ 40 ವರ್ಷಗಳಿಂದ ರಾಜಶೇಖರ್ ಪಾಟೀಲ್'ರಿಂದ ದಲಿತರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. 40 ವರ್ಷಗಳಿಂದ ಬೀದರ್'ನಲ್ಲಿ, ಅದರಲ್ಲೂ ಹುಮನಾಬಾದ್'ನಲ್ಲಿ ರಾಜಶೇಖರ್ ಪಾಟೀಲ್ ಅವರ ಕುಟುಂಬದವರ ದಬ್ಬಾಳಿಕೆಯೇ ನಡೆಯುತ್ತಿದೆ. ಇಲ್ಲಿ ಬೇರೆಯವರನ್ನು ಬೆಳೆಯಲು ಬಿಡುತ್ತಿಲ್ಲ ಎಂಬುದು ಬಿಎಸ್'ಪಿ ಮುಖಂಡರ ಆಕ್ಷೇಪ. ಅಲ್ಲದೇ, ರಾಜಶೇಖರ್ ಪಾಟೀಲ್ ಅವರ ನಂಗನಾಚ್'ನ ವಿಡಿಯೋವಿರುವ ಸಿಡಿಯನ್ನು ಸಮಯ ಸಂದರ್ಭ ನೋಡಿ ತಾನು ಬಹಿರಂಗಗೊಳಿಸುವುದಾಗಿ ಅಂಕುಶ್ ಗೋಕಲೆ ಹೇಳಿದ್ದಾರೆ.
ವರದಿ: ಲಿಂಗೇಶ್ ಮರಕಲೆ, ಸುವರ್ಣನ್ಯೂಸ್, ಬೀದರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.