ಎಐಸಿಸಿ ನಾಯಕ ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆ ಭಾರತದ ಭವಿಷ್ಯದ ರಾಜಕಾರಣಕ್ಕೆ ಹೊಸ ದಿಕ್ಸೂಚಿ
ಚಿಕ್ಕಬಳ್ಳಾಪುರ (ಅ.06): ಎಐಸಿಸಿ ನಾಯಕ ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆ ಭಾರತದ ಭವಿಷ್ಯದ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಲಿದ್ದು, ಜಾತಿ, ಧರ್ಮದ ಹೆಸರಲ್ಲಿ ದೇಶ ವಿಭಜನೆಗೆ ಪಿತೂರಿ ನಡೆಸುವ ಕೋಮುವಾದಿಗಳಿಗೆ ತಕ್ಕಪಾಠ ಕಲಿಸಲಿದೆ ಎಂದು ಕೆಜಿಎಫ್ ಶಾಸಕಿ ರೂಪ ಶಶಿಧರ್ ತಿಳಿಸದರು.
ನಗರದ ಜಿಲ್ಲಾ ಕಾಂಗ್ರೆಸ್ (Congress) ಕಚೇರಿಯಲ್ಲಿ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಾರತ ಜೋಡೋ ಯಾತ್ರೆ ತೀವ್ರ ಸಂಚಲನ ಮೂಡಿಸಿದೆ. ಯಾತ್ರೆಗೆ ಸಿಗುತ್ತಿರುವ ಜನಸ್ಪಂದನೆ ನೋಡಿ ಬಿಜೆಪಿ ಹತಾಶೆಯಿಂದ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದೆಯೆಂದು ಕಿಡಿಕಾರಿದರು.
ದೇಶದಲ್ಲಿ ಪರಿವರ್ತನೆ ತರಲಿದೆ
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧಿ ಕುಟುಂಬ ಎಂದೂ ಕೂಡ ಅಧಿಕಾರಕ್ಕಾಗಿ ರಾಜಕಾರಣ (Politics) ಮಾಡಿಲ್ಲ. ಮನೆ ಬಾಗಿಲಿಗೆ ಬಂದ ಅಧಿಕಾರವನ್ನು ತ್ಯಾಗ ಮಾಡಿದ ಕೀರ್ತಿ ಸೋನಿಯ ಗಾಂಧಿಗೆ ಸಲ್ಲುತ್ತದೆ. ದೇಶದಲ್ಲಿ ಕಾಂಗ್ರೆಸ್ ಮಾತ್ರ ಎಲ್ಲಾ ಜಾತಿ, ಧರ್ಮಗಳ ನಡುವೆ ಸಾಮಾರಸ್ಯ ಮೂಡಿಸಿ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಈ ಯಾತ್ರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪರಿವರ್ತನೆ ತರಲಿದ್ದು ಅಧಿಕಾರಕ್ಕಾಗಿ ಹಾತೊರೆಯುವ ಬಿಜೆಪಿಗೆ ಈ ಯಾತ್ರೆ ತಕ್ಕಪಾಠ ಕಲಿಸಲಿದೆ. ರಾಜ್ಯದ ಜನತೆ ಕೂಡ ಪಕ್ಷಾತೀತವಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ, ದೇಶಕ್ಕೆ ಬಿಜೆಪಿ ದೊಡ್ಡ ಅಪಾಯ ಎಂದರು.
ಪ್ರಿಯಾಂಕ ಗಾಂಧಿ ಭಾಗಿ
ಭಾರತ ಜೋಡೋ ದೇಶದ ಸ್ವಾತಂತ್ರ್ಯ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಹಾಗೂ ಬೃಹತ್ ಯಾತ್ರೆ ಆಗಿದ್ದು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಕಾಂಗ್ರೆಸ್ 2023ಕ್ಕೆ ರಾಜ್ಯದಲ್ಲಿ, 2024ಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಸಂಕಷ್ಟದಲ್ಲಿ ಮುಳಗಿದೆ. ಜನ ಬದಲಾವಣೆಗೆ ಎದುರು ನೋಡುತ್ತಿದ್ದಾರೆ. ಪ್ರಿಯಾಕಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ. ಕೆ.ವಿ.ಅನುಸೂಯಮ್ಮ, ಹಿರಿಯ ಮುಖಂಡರಾದ ನಂದಿ ಅಂಜಿನಪ್ಪ, ಯಲುವಹಳ್ಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ರಾಮಕೃಷ್ಣ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಮಂಚನಬಲೆ ಇಸ್ಮಾಯಿಲ್, ಮಹಿಳಾ ಮುಖಂಡರಾದ ಮಮತಾ ಮೂರ್ತಿ, ಯುವ ಮುಖಂಡರಾದ ಕೆ.ಎನ್.ರಘು, ಜಗದೀಶ್, ಕೋನಪಲ್ಲಿ ಕೋದಂಡ, ಅಡ್ಡಗಲ್ ಶ್ರೀಧರ್, ಪಟ್ರೇನಹಳ್ಳಿ ಕೃಷ್ಣ, ಕೆ.ಎನ್.ಮುನೀಂದ್ರ, ವಕೀಲ ನಾರಾಯಣಸ್ವಾಮಿ, ಚಿಂತಾಮಣಿ ಈರುಳ್ಳಿ ಶಿವಣ್ಣ, ಚಂದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.
ಇಡಿ ಅಧಿಕಾರಿಗಳಿಗೆ ಆಡಿಟ್ ಗೊತ್ತಿಲ್ಲವೇ?
ಪದೇ ಪದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸುವ ಬಗ್ಗೆ ಕೆಜಿಎಫ್ ಶಾಸಕಿ ರೂಪ ಶಶಿಧರ್ ಕಿಡಿಕಾರಿದರು. ಇಡಿ ಅಧಿಕಾರಿಗಳಿಗೆ ಆಡಿಟ್ ಮಾಡಲು ಬರುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ರಾಜಕೀಯ ದುರುದ್ದೇಶದಿಂದ ದಾಳಿ ಮಾಡಲಾಗುತ್ತಿದೆ. ಆದರೆ ಅವರು ಬಂಡೆಯಂತೆ ಎಲ್ಲವನ್ನು ಎದುರಿಸಲಿದ್ದಾರೆಂದರು.