ಹೊರಟ್ಟಿ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಲಿ: ಬೆಂಬಲಿಗರು ಆಕ್ರೋಶ

By Kannadaprabha NewsFirst Published Oct 6, 2022, 3:30 AM IST
Highlights

ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಇದ್ದ ಹುಮ್ಮಸ್ಸು ಈಗೇಕಿಲ್ಲ ?: ಅಭಿಮಾನಿಗಳ ಪ್ರಶ್ನೆ

ಹುಬ್ಬಳ್ಳಿ(ಅ.06): ಮೇಲ್ಮನೆಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡದೇ ಬಿಜೆಪಿ ಅನ್ಯಾಯ ಮಾಡುತ್ತಿದೆ. ಮಾತಿನಂತೆ ಹೊರಟ್ಟಿ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಲಿ ಎಂದು ಹೊರಟ್ಟಿ ಅಭಿಮಾನಿಗಳು, ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಶಿಕ್ಷಣ ತಜ್ಞ ಎಂ.ಎನ್‌. ಚಂದ್ರೇಗೌಡ, ಶಿವಯೋಗಿ ಅಂಗಡಿ, ಎಸ್‌.ಎಸ್‌. ಗಡ್ಡದ, ಶರಣಪ್ಪ ರೇವಡಿ, ವೆಂಕಟೇಶ ಬದ್ದಿ, ವೆಂಕಟೇಶ ಕುಲಕರ್ಣಿ ಮತ್ತಿತರರು, ಪಕ್ಷಕ್ಕೆ ಕರೆದುಕೊಳ್ಳುವಾಗ ಇದ್ದ ಹುಮ್ಮಸ್ಸು ಬಿಜೆಪಿಗೆ ಇದೀಗ ಇಲ್ಲವಾಗಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಸ್ಥಳೀಯ ಮುಖಂಡರೂ ಹೊರಟ್ಟಿ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆ ಅವರ ಬೆಂಬಲಿಗರಲ್ಲಿ ಒಡಮೂಡಿದೆ.

ಬಸವರಾಜ ಹೊರಟ್ಟಿ ಶಿಕ್ಷಕರ ಕ್ಷೇತ್ರದ ಅನಭಿಷಿಕ್ತ ನಾಯಕರೆಂದು ಗುರುತಿಸಿಕೊಂಡವರು. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 8 ಬಾರಿ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ವಲ್ಡ್‌ರ್‍ ಬುಕ್‌ ಆಫ್‌ ರಿಕಾರ್ಡ್‌ನಲ್ಲೂ ಅವರ ಈ ಸಾಧನೆ ದಾಖಲೆಯಾಗಿದೆ. 1980ರಲ್ಲಿ ಒಂದು ಬಾರಿ ಮಾತ್ರ ಪಕ್ಷೇತರರಾಗಿ ಆಯ್ಕೆಯಾಗಿದ್ದ ಹೊರಟ್ಟಿ, ನಂತರದ ಎಲ್ಲ ಚುನಾವಣೆಗಳನ್ನು ಜನತಾ ಪರಿವಾರದಿಂದ ಎದುರಿಸಿದವರು. ಜನತಾ ಪರಿವಾರದಲ್ಲೇ ಬೆಳೆದವರು. ಇಂಥ ಜೆಡಿಎಸ್‌ ಬಿಟ್ಟು ಬಿಜೆಪಿಗೆ ಬಂದಿರುವುದು ಆ ಪಕ್ಷಕ್ಕೆ ಶಕ್ತಿ ತುಂಬಿದೆ ಎನ್ನುವುದನ್ನು ಆ ಪಕ್ಷದ ಮುಖಂಡರು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

ಸಭಾಪತಿ ಹುದ್ದೆ: ಬಿಜೆಪಿ ಹಿಂದೇಟಿನಿಂದ ಬಸವರಾಜ ಹೊರಟ್ಟಿ ಅತಂತ್ರ?

ಬಿಜೆಪಿ ಬಾವುಟ ಹಾರಿಸಿದ್ದಾರೆ:

ಈ ಚುನಾವಣೆ ವೇಳೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಅತ್ಯಂತ ಪ್ರೀತಿ ವಿಶ್ವಾಸದಿಂದ ಹೊರಟ್ಟಿಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಯ ಎಲ್ಲ ನಾಯಕರೂ ಒಮ್ಮತ ಸೂಚಿಸಿದ್ದರು. ಬಳಿಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಹೊರಟ್ಟಿಅವರು ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ಬಿಜೆಪಿ ಬಾವುಟ ಹಾರಿಸಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದು ನೆನೆಪಿಸಿದ್ದಾರೆ.

ಚುನಾವಣೆ ಮುಗಿದ ಬಳಿಕ ಬಿಜೆಪಿ ಹೊರಟ್ಟಿ ಅವರನ್ನು ಸಭಾಪತಿಗಳನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ಮುಖಂಡರು ಬಹಿರಂಗವಾಗಿ ಹೇಳಿದ್ದರು. ಆ ವಿಶ್ವಾಸವೂ ನಮ್ಮಲ್ಲಿತ್ತು. ಆದರೆ ಹಾಗೆ ಮಾಡಲಿಲ್ಲ, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವಾಗಿನ ಉತ್ಸಾಹ ಸಭಾಪತಿ ಮಾಡುವಾಗ ಏಕೆ ತೋರಲಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಬಿಜೆಪಿಯ ಮುಖಂಡರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಸೇರಿದಂತೆ ಯಾವೊಬ್ಬ ನಾಯಕರು ಚಕಾರ ಎತ್ತುತ್ತಿಲ್ಲ. ಕೇಳಿದರೂ ಪಕ್ಷ ಅವರಿಗೆ ಏನು ಗೌರವ ಕೊಡಬೇಕೋ ಅದನ್ನು ಕೊಡುತ್ತದೆ ಎಂದು ಹಾರಿಕೆ ಉತ್ತರ ಹೇಳುತ್ತಿದ್ದಾರಷ್ಟೇ. ಅವರ ಪರವಾಗಿ ಧ್ವನಿ ಎತ್ತಿ ಸಭಾಪತಿಗಳನ್ನಾಗಿ ಮಾಡಿ ಎಂದು ಒತ್ತಡ ಹೇರುವ ಕೆಲಸ ಮಾತ್ರ ಆಗಲಿಲ್ಲ. ಇದು ನಮ್ಮಲ್ಲಿ ಬೇಸರ ಉಂಟು ಮಾಡಿದೆ ಎಂದಿದ್ದಾರೆ.

ಹೊರಟ್ಟಿ ಅವರ ನಾಲ್ಕು ದಶಕಗಳ ಸಾರ್ಥಕ ಸೇವೆಗೆ ನೀಡಬೇಕಾದ ಗೌರವವನ್ನು ಬಿಜೆಪಿ ನೀಡಬೇಕು. ಶೀಘ್ರದಲ್ಲಿ ಅವರನ್ನು ಸಭಾಪತಿಗಳನ್ನಾಗಿ ಮಾಡಬೇಕು. ಇಲ್ಲವಾದರೆ ಅಪಾರ ಸಂಖ್ಯೆಯಲ್ಲಿರುವ ನಾವುಗಳು ಮುಂಬರುವ ಚುನಾವಣೆಗಳಲ್ಲಿ ಬೇರೆ ನಿರ್ಧಾರ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
 

click me!