
ಪ್ರತಿಷ್ಠಿತ ಫ್ರೆಂಚ್ ಓಪನ್ ಚಾಂಪಿಯನ್ ಎನಿಸಿದ್ದ ಸ್ಪೇನಿನ ಗರ್ಬೈನ್ ಮುಗುರುಜಾ ಮತ್ತು ಈ ಬಾರಿಯ ವಿಂಬಲ್ಡನ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ಕೆನಡಾದ ಮಿಲೊಸ್ ರೋನಿಕ್ ವರ್ಷದ ಕೊನೆಯ ಗ್ರಾಂಡ್ ಸ್ಲಾಮ್‌ನ ದ್ವಿತೀಯ ಸುತ್ತಿನಲ್ಲಿ ಪರಾಭವ ಹೊಂದುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಆರ್ಥರ್ ಆ್ಯಶೆ ಕ್ರೀಡಾಂಗಣದ ಟೆನಿಸ್ ಕೋರ್ಟ್‌ನಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸ್ಪೇನಿನ ಸ್ಟಾರ್ ಆಟಗಾರ್ತಿ ಮುಗುರುಜಾ 5-7, 4-6 ಸೆಟ್‌ಗಳಿಂದ ಲಾಟ್ವಿಯಾದ ಅನಸ್ಟಾಸಿಜ ಸೆವಾಸ್ಟೋವಾ ವಿರುದ್ಧ ಸೋಲು ಕಂಡರು. ಮೊದಲ ಬಾರಿಗೆ ಈ ಅಂಗಣದಲ್ಲಿ ಎರಡನೇ ಸುತ್ತಿನ ಪಂದ್ಯವನ್ನಾಡಿದ ಮುಗುರುಜಾಗೆ, 48ನೇ ಶ್ರೇಯಾಂಕಿತೆ ಸೆವಾಸ್ಟೋವಾ ಪ್ರಬಲ ಪೈಪೋಟಿ ನೀಡಿದರು. ಅಲ್ಲದೇ ಮುಗುರುಜಾ ಅವರ ಸರ್ವ್‌ಗಳನ್ನು ಬ್ರೇಕ್ ಮಾಡಿದ ಲಾಟ್ವಿಯಾದ ಆಟಗಾರ್ತಿ ಪ್ರತಿ ಸೆಟ್‌ನಲ್ಲಿ 2 ಪಾಯಿಂಟ್ಸ್‌ಗಳ ಅಂತರದೊಂದಿಗೆ ಪಂದ್ಯ ಗೆದ್ದರು.
ಕೆರ್ಬರ್‌ಗೆ ಮುನ್ನಡೆ: ಎರಡನೇ ಶ್ರೇಯಾಂಕಿತೆ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪ್ರಯಾಸದ ಜಯ ದಾಖಲಿಸಿದರು. ಕೆರ್ಬರ್ 6-2, 7-6 (9-7)ಸೆಟ್‌ಗಳಿಂದ ಕ್ರೋಯೇಷಿಯಾದ ಮಿರ್ಜಾನಾ ಲುಸಿಕ್ ಬರೋನಿ ಎದುರು ಗೆಲುವು ಪಡೆದು ಮುಂದಿನ ಸುತ್ತು ಪ್ರವೇಶಿಸಿದರು. ಮೂರನೇ ಸುತ್ತಿನಲ್ಲಿ ಕೆರ್ಬರ್, ಅಮೆರಿಕದ ಸಿಸಿ ಬೆಲ್ಲಿಸ್ ಎದುರು ಸೆಣಸಲಿದ್ದಾರೆ.
3ನೇ ಸುತ್ತಿಗೆ ನಡಾಲ್: 2010 ಮತ್ತು 2013ರಲ್ಲಿ ಯುಎಸ್ ಟ್ರೋಫಿ ಜಯಿಸಿರುವ 4ನೇ ಶ್ರೇಯಾಂಕಿತ ಸ್ಪೇನಿನ ಸ್ಟಾರ್ ಆಟಗಾರ ರಾಫೆಲ್ ನಡಾಲ್ ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ 6-0, 7-5, 6-1 ಸೆಟ್‌ಗಳಿಂದ ಇಟಲಿಯ ಆಂಡ್ರೆಸ್ ಸೆಪ್ಪಿ ಎದುರು ಜಯ ಪಡೆದರು. ಮೂರನೇ ಸುತ್ತಿನಲ್ಲಿ ನಡಾಲ್, ಶ್ರೇಯಾಂಕ ರಹಿತ ರಷ್ಯಾದ ಆ್ಯಂಡ್ರೆ ಕುಜ್ನೆಟ್ಸೋವಾ ಎದುರು ಸೆಣಸಲಿದ್ದಾರೆ.
ರೊನಿಕ್‌ಗೆ ಆಘಾತ: ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಲೊಸ್ ರೊನಿಕ್ 7-6(7-4), 5-7, 5-7, 1-6 ಸೆಟ್‌ಗಳಿಂದ ಅಮೆರಿಕದ ರಯಾನ್ ಹ್ಯಾರಿಸನ್ ಎದುರು ಸೋಲು ಕಂಡರು. ವಿಶ್ವದ 5ನೇ ಶ್ರೇಯಾಂಕಿತ ರೊನಿಕ್, 120ನೇ ಶ್ರೇಯಾಂಕ ಪಡೆದಿರುವ ಹ್ಯಾರಿಸನ್ ಆಟದ ಎದುರು ಮಂಕಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.