
ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘಿಸುವವರ ಮೇಲೆ ಕಣ್ಗಾವಲು ವ್ಯವಸ್ಥೆಗೆ ತಾಂತ್ರಿಕತೆ ಮೆರಗು ನೀಡಿರುವ ಪೊಲೀಸ್ ಇಲಾಖೆಯು, ಈಗ ಸಂಚಾರ ನಿಯಮ ಉಲ್ಲಂಘಿಸಿ ಕಿರಿಕ್ ಮಾಡುವವರ ದಂಡಿಸಲು ಬ್ಲ್ಯಾಕ್ ಬೆರಿ ಬದಲಿಗೆ ಅತ್ಯಾಧುನಿಕ ‘ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್' (ಪಿಡಿಎ) ಸಾಧನವನ್ನು ಸಂಚಾರ ಪೊಲೀಸರಿಗೆ ವಿತರಿಸಿದೆ.
ಈ ಸಾಧನವು ಸಂಚಾರ ನಿಯಮ ಉಲ್ಲಂಘಿಸುವ ವಾಹನದ ಭಾವಚಿತ್ರ ಹಾಗೂ ವಿಡಿಯೋ ಸೆರೆ ಹಿಡಿಯಲಿದ್ದು, ಈ ಸಾಕ್ಷ್ಯವನ್ನು ಬಳಸಿ ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ಪಾವತಿಗೆ ಕಿರಿಕಿರಿ ಮಾಡುವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ದಂಡ ವಸೂಲಿಯಲ್ಲಿ ಅಕ್ರಮ ತಡೆಗೆ ಸಹ ಇದೂ ಅಸ್ತ್ರವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಬ್ಲ್ಯಾಕ್ ಬೆರಿ ಸಾಧನಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅದರ ಪರ್ಯಾಯವಾಗಿ ರು.10 ಕೋಟಿ ವೆಚ್ಚದಲ್ಲಿ ಮತ್ತಷ್ಟುಸುಧಾರಿತ ತಾಂತ್ರಿಕೆಯುಳ್ಳ ಸಾಧನವನ್ನು ಸಿಬ್ಬಂದಿಗೆ ವಿತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
2008ರಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ನಾಗರಿಕರಿಗೆ ದಂಡ ವಸೂಲಿಗೆ ಮಾಡುವ ಪೊಲೀಸರಿಗೆ ಬ್ಲ್ಯಾಕ್ ಬೆರಿ ಸಾಧನ ನೀಡಲಾಗಿತ್ತು. ಈ ಸಾಧನದ ಗುತ್ತಿಗೆ ಅವಧಿಯು 2016ರ ಜೂನ್ 30ಕ್ಕೆ ಮುಗಿದ ಹಿನ್ನೆಲೆಯಲ್ಲಿ ‘ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್' (ಪಿಡಿಎ) ವಿತರಣೆಗೆ ನಿರ್ಧರಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಸಹಾಯಕ ಸಬ್ ಇನ್ಸ್'ಪೆಕ್ಟರ್ ಮೇಲ್ಮಟ್ಟದ ಅಧಿಕಾರಿಗಳಿಗೆ ಪಿಡಿಎ ಸಾಧನ ವಿತರಣೆಯಾಗಿದ್ದು, ಇದರ ನಿರ್ವಹಣೆ ಹೊಣೆಗಾರಿಕೆಯನ್ನು ಪಿಡಿಎ ಪೂರೈಸಿರುವ ಕಂಪನಿಯೇ ಹೊತ್ತಿದ್ದು, ಐದು ವರ್ಷಗಳಿಗೆ .10 ಕೋಟಿಗೆ ಗುತ್ತಿಗೆ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಪಿಡಿಎನಲ್ಲಿ ಏನಿದೆ?
ಈ ಸಾಧನವು ಸ್ಮಾರ್ಟ್'ಫೋನ್ ಮಾದರಿಯಲ್ಲಿದೆ. ಇದರಲ್ಲಿ ಪ್ರಿಂಟರ್, ಸ್ವೈಪಿಂಗ್ ಯಂತ್ರ ಹಾಗೂ ಜಿಪಿಎಸ್ ವ್ಯವಸ್ಥೆ ಸಹ ಅಳವಡಿಸಲಾಗಿದ್ದು, ಚಾಲನಾ ಪರವಾನಗಿಗಳ (ಸ್ಮಾರ್ಟ್'ಕಾರ್ಡ್ ರೂಪದ ಡಿಎಲ್) ಮಾಹಿತಿ ಸಂಗ್ರಹಿಸಬಹುದು. ಹಾಗೆಯೇ ಭಾವಚಿತ್ರ ಹಾಗೂ ವಿಡಿಯೋ ಸೆರೆಹಿಡಿಯುವ ವ್ಯವಸ್ಥೆ ಅಡಕವಾಗಿದೆ.
ಹೀಗಾಗಿ ಬ್ಲ್ಯಾಕ್'ಬೆರಿಗಿಂತಲೂ ಅತ್ಯಾಧುನಿಕ ಸಾಧನವಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವುದರಿಂದ ದಂಡ ವಸೂಲಿ ಸಂಪೂರ್ಣವಾಗಿ ಕ್ಯಾಶ್'ಲೆಸ್ ಆಗಿದೆ. ದಂಡ ಪಾವತಿಗೆ ಜೇಬಿನಲ್ಲಿ ಹಣವಿಲ್ಲದಿದ್ದರೂ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಸಿ ದಂಡ ಪಾವತಿಸಬಹುದು. ಅಲ್ಲದೆ, ನಿಯಮ ಮೀರಿದ ಬಗ್ಗೆ ಭಾವಚಿತ್ರ ಹಾಗೂ ವಿಡಿಯೋ ಸಾಕ್ಷಿ ಇರುವ ಕಾರಣ ಈ ಬಗ್ಗೆ ಆಕ್ಷೇಪ ಎತ್ತಿ ದುಂಡಾವರ್ತನೆ ತೋರುವ ಗದ್ದಲ ಕೊನೆಗಾಣಲಿದೆ. ಜಿಪಿಎಸ್ ಅಳವಡಿಸಿರುವುದರಿಂದ ಪೊಲೀಸರ ಮೇಲೂ ಅಧಿಕಾರಿಗಳು ನಿವಾವಹಿಸಿರುತ್ತಾರೆ ಎಂದು ಆಯುಕ್ತರು ಹೇಳಿದರು.
ವಿದೇಶಿ ಸಂಚಾರ ಮಾದರಿ:
ಉದ್ಯಾನನಗರಿಯಲ್ಲಿ ಹಂತಹಂತವಾಗಿ ವಿದೇಶಿ ಮಾದರಿ 'ಸಂಚಾರ ನಿಯಮ' ಜಾರಿಗೊಳಿಸಲು ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ನಗರದ ವಾಹನ ಸವಾರರಿಗೆ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಕೆಲ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ನಗರದ 11 ಪ್ರಮುಖ ಜಂಕ್ಷನ್'ಗಳನ್ನು 'ಝೀರೋ ಟಾಲರೆನ್ಸ್' ಎಂದು ಗುರುತಿಸಿ ಕಟ್ಟುನಿಟ್ಟಾಗಿ ಸಂಚಾರ ನಿಯಮ ಅನುಷ್ಠಾನಗೊಳಿಸಲಾಗಿದೆ. ಅಲ್ಲದೆ ಪಾದಚಾರಿ ಪಥ ದಾಟುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಜಂಕ್ಷನ್'ಗಳಲ್ಲಿ ಪಥ ಶಿಸ್ತು ಉಲ್ಲಂಘಿಸಿದ ಸಂಬಂಧ 84 ಸಾವಿರ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿದೇಶಿ ಮಾದರಿಯಲ್ಲಿ ಸಂಚಾರ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಅನುಕೂಲಗಳೇನು?
1) ಪಿಡಿಎನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದು ಭಾವಚಿತ್ರ, ವಿಡಿಯೋ ಸಮೇತ ಸೆರೆ
2) ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ಪಾವತಿಗೆ ಕಿರಿಕಿರಿ ಮಾಡಲು ಸಾಧ್ಯವಾಗಲ್ಲ
3) ಜೇಬಿನಲ್ಲಿ ಹಣವಿಲ್ಲದಿದ್ದರೂ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಿ ದಂಡ ಪಾವತಿಸಬಹುದು
4 ಜಿಪಿಎಸ್ ಅಳವಡಿಸಿರುವುದರಿಂದ ಪೊಲೀಸರ ಮೇಲೂ ಅಧಿಕಾರಿಗಳಿಂದ ನಿಗಾ ಸಾಧ್ಯತೆ
‘ಸೆಲ್ಫಿ ವಿತ್ ಸ್ಕೈವಾಕ್'ಗೆ ಉತ್ತಮ ಪ್ರತಿಕ್ರಿಯೆ:
ಪಾದಚಾರಿಗಳಿಗೆ ಸ್ಕೈವಾಕ್ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ‘ಸೆಲ್ಫಿ ವಿತ್ ಸ್ಕೈವಾಕ್' ಪ್ರಚಾರ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದರು. ಈ ಪ್ರಚಾರ ಆಂದೋಲನಕ್ಕೆ ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಹ ಸ್ಕೈವಾಕ್ ಮೇಲೆ ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಲ್ಲಿರುವ ಬೆಂಗಳೂರು ಪೊಲೀಸರ ಪೇಜ್‌ಗೆ ಅಪ್‌ಲೋಡ್ ಮಾಡುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.