
ಬೆಂಗಳೂರು: ಕನ್ನಡ ಭಾಷೆ ಮಾತನಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ಕಾಲೇಜೊಂದರ ಹಾಸ್ಟೆಲ್ ವಾರ್ಡನ್ ಒಬ್ಬರನ್ನು ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಕನ್ನಡ ಮಾತನಾಡಬೇಡಿ ಕನ್ನಡ ಮನೆಯಲ್ಲಿ ಮಾತನಾಡಿ ಎಂದು ಆ ವಾರ್ಡನ್ ವಿದ್ಯಾರ್ಥಿಗಳಿಗೆ ಸೂಚಿಸುತ್ತಿರುವ ವೀಡಿಯೋ ವೈರಲ್ ಆದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೀಗೆ ಕನ್ನಡ ಭಾಷೆ ಮಾತನಾಡಬೇಡಿ ಎಂದು ಹೇಳಿ ಅಮಾನಾತ್ತಾದ ಇಂಜಿನಿಯರಿಂಗ್ ಕಾಲೇಜಿನ ವಾರ್ಡನ್‌ನನ್ನು ಸುರೇಶ್ ಪಿವಿ ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ವಾರ್ಡನ್ ಆಗಿದ್ದ ಇವರು, ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗಳಿಗೆ, ಕನ್ನಡ ಮಾತನಾಡಬೇಡಿ, ಕನ್ನಡವನ್ನು ನಿಮ್ಮ ಮನೆಯಲ್ಲಿ ಮಾತನಾಡಿ ಎಂದು ಹಿಂದಿ ಭಾಷೆಯಲ್ಲಿ ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಗಳು ಅವರು ಹೀಗೆ ಹೇಳುತ್ತಿರುವ ವೀಡಿಯೋವನ್ನು ರಹಸ್ಯವಾಗಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ನಂತರ ಈ ಘಟನೆ ನಡೆದಿದೆ.
ಈ ವಾರ್ಡನ್‌ನ ಈ ಸೂಚನೆಗೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪಿವಿ ಸುರೇಶ್, ವಿದ್ಯಾರ್ಥಿಗಳು ತಮ್ಮ ರಾಜ್ಯ ಭಾಷೆ ಮಾತನಾಡುವುದಕ್ಕೆ ಕಾಲೇಜು ಆಡಳಿತ ಮಂಡಳಿಯಿಂದ ಮೊದಲೇ ಅನುಮತಿ ಪಡೆದಿರಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಕನ್ನಡ ಪರ ಕಾರ್ಯಕರ್ತರು ಇದನ್ನು ಕನ್ನಡ ವಿರೋಧಿ ನೀತಿ ಹಾಗೂ ಇದು ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಗೆ ಮಾಡುತ್ತಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಕಾಲೇಜು ಗೇಟಿನ ಮುಂದೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಇದಾದ ನಂತರ ಕಾಲೇಜು ಆಡಳಿತವು ವಾರ್ಡನ್ ಪಿವಿ ಸುರೇಶ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.
ಇದನ್ನೂ ಓದಿ: ಚಾಟ್ ಜಿಪಿಟಿ ಸಲಹೆ ಪಡೆದು 3 ತಿಂಗಳಲ್ಲಿ 27 ಕೇಜಿ ತೂಕ ಇಳಿಸಿದ ಯುವಕ
ಎಎಂಸಿ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಎಎಂಸಿ ಬಾಲಕರ ಹಾಸ್ಟೆಲ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ದೂರಿನ ಗಂಭೀರತೆಯನ್ನು ಪರಿಗಣಿಸಿ, ಸಂಸ್ಥೆಯ ಹಿತದೃಷ್ಟಿಯಿಂದ, ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಹಾಸ್ಟೆಲ್ ವಾರ್ಡನ್ ಕರ್ತವ್ಯಗಳಿಂದ ವಜಾಗೊಳಿಸಲಾಗಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೀವು ಹೊಂದಿದ ದಾಖಲೆಗಳು ಮತ್ತು ಹಾಸ್ಟೆಲ್‌ಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ತಕ್ಷಣವೇ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ನಿಮಗೆ ನಿರ್ದೇಶಿಸಲಾಗಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕುಡಿದು ಗಲಾಟೆ: ಬಾಯ್‌ಫ್ರೆಂಡ್ ಎದೆ ಬಗೆದ ಮುದ್ದು ಮುಖದ ಪ್ರೇಯಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.